ಧಾರವಾಡ : ಹೊರಟ್ಟಿ ಅವರು ಬಿಜೆಪಿಗೆ ಸೇರ್ಪಡೆಯಾದರೂ ಪರಿಷತ್ ಟಿಕೆಟ್ ನನಗೆ ಸಿಗಲಿದೆ ಎಂದು ಮೋಹನ್ ಲಿಂಬಿಕಾಯಿ ಅವರು ಹೇಳಿದ್ದಾರೆ. ಅವರು ಅಭ್ಯರ್ಥಿಯಾದರೆ ನನಗೇನು ತೊಂದರೆ ಇಲ್ಲ. ನನಗೂ ಆ ಬಗ್ಗೆ ಪ್ರೀತಿ ಇದೆ. ನಾನು ಇನ್ನು ಬಿಜೆಪಿ ಸೇರಿಲ್ಲ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿ ಸೇರುವ ಬಗ್ಗೆ ಅನೇಕರು ಬಂದು ಕೇಳಿದ್ದರು. ಹೀಗಾಗಿ, ನಾನು ಬಿಜೆಪಿ ಸೇರುವ ವಿಚಾರ ಹೇಳಿಕೊಂಡಿದ್ದೆ. ಆದರೆ, ಇನ್ನೂ ಪರಿಷತ್ ಚುನಾವಣೆ ಪ್ರಕಟವಾಗಿಲ್ಲ. ಮೋಹನ್ ಲಿಂಬಿಕಾಯಿ ಅವರು ಅಭ್ಯರ್ಥಿಯಾದರೆ ನನ್ನದೇನು ತಕರಾರಿಲ್ಲ ಎಂದರು.
ಕೆಲವರು ಕೇಳಿದ್ದಕ್ಕಾಗಿಯೇ ನಾನು ಹಾಗೆ ಹೇಳಿದ್ದೆ. ನಾನು ಮಾತನಾಡಿದ ಮೇಲೆ ಅವರೆಲ್ಲ ಸುಮ್ಮನೆ ಇದ್ದಾರೆ. ನಾನು ತಪ್ಪು, ಸುಳ್ಳು ಮಾತನಾಡಿದ್ದರೆ ಅವರು ಕೇಳಬೇಕಿತ್ತಲ್ಲ. ಜವಾಬ್ದಾರಿ ಸ್ಥಾನದಲ್ಲಿದ್ದವರು ಮಾತನಾಡಬೇಕಿತ್ತು. ನಾನು ಎಂದಿಗೂ ಸುಳ್ಳು ಹೇಳೋದಿಲ್ಲ. ಅವರು ಈಗ ಇಲ್ಲವೆಂದರೆ ನನ್ನದೇನು ತಕರಾರಿಲ್ಲ. ಅವರ ಬಗ್ಗೆ ಇನ್ನೊಮ್ಮೆ ಮಾತನಾಡಲೂ ಹೋಗೋದಿಲ್ಲ. ನಾನು ಚುನಾವಣೆಗೆ ನಿಲ್ಲುವುದಂತೂ ಗ್ಯಾರಂಟಿ ಎಂದರು.
ಸ್ಪರ್ಧೆಯ ಬಗ್ಗೆ ಈಗಲೇ ಹೇಳಲ್ಲ : ನಾನು ಯಾವುದೇ ಪಕ್ಷದಲ್ಲಿದ್ದರೂ ಶಿಕ್ಷಕರು ನನ್ನ ಕೈ ಬಿಡುವುದಿಲ್ಲ. ಶಿಕ್ಷಕರು ನನ್ನನ್ನು ಸೋಲಿಸುವುದಿಲ್ಲ. ನಾನು ಯಾವ ಪಕ್ಷದಿಂದ ಚುನಾವಣೆಗೆ ನಿಂತರೂ ಗೆಲ್ಲಿಸುತ್ತಾರೆ. ನಾನು ರಾಷ್ಟ್ರೀಯ ಪಕ್ಷದಲ್ಲಿರಬೇಕು ಅಂತಾ ಕೆಲವರು ಹೇಳಿದರು. ಪಕ್ಷಕ್ಕೆ ಬನ್ನಿ ಅಂತಾ ಕೆಲವರು ಕೇಳಿಕೊಂಡರು.
ಆ ಸಂಬಂಧ ಕೆಲ ಚರ್ಚೆಗಳು ಆಗಿದ್ದವು. ಆಗ ಆಯ್ತು ಅಂತಾ ಒಪ್ಪಿಕೊಂಡಿದ್ದೆಯಷ್ಟೇ ಎಂದರು. ಜೆಡಿಎಸ್ ಬಗ್ಗೆ ನಾನು ಟೀಕೆ ಮಾಡುವುದಿಲ್ಲ. ನನ್ನನ್ನು ಜೆಡಿಎಸ್ ಪಕ್ಷವೇ ಬೆಳೆಸಿದೆ. ಅಲ್ಲಿ ಬಿಟ್ಟು ಹೋಗಿ ಅಂತಾ ಯಾರಿಗೂ ನಾನು ಹೇಳಿಲ್ಲ. ದೇವೇಗೌಡರೇ ನನ್ನನ್ನು ಕರೆದು ಮಂತ್ರಿ ಮಾಡಿದವರು ಎಂದರು.
ಓದಿ: ಚೀಟಿ ವ್ಯವಹಾರದಲ್ಲಿ ಕೋಟ್ಯಂತರ ರೂ. ವಂಚಿಸಿ ಕೋರ್ಟ್ನಿಂದಲೇ ನೋಟಿಸ್ ಕೊಡಿಸಿದ ಖತರ್ನಾಕ್ ವಂಚಕಿ