ಹುಬ್ಬಳ್ಳಿ: ಸುಕ್ಷೇತ್ರ ಕೂಡಲ ಸಂಗಮದಲ್ಲಿ ಲಿಂಗಾಯತ ಧರ್ಮ ಸಂಸ್ಥಾಪನಾ ದಿನದ ಅಂಗವಾಗಿ 33 ನೇ ಶರಣ ಮೇಳವನ್ನು ಜ.11 ರಿಂದ 14 ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಶರಣ ಮೇಳ ಉತ್ಸವ ಸಮಿತಿಯ ಉಪಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವ ಧರ್ಮ ಪೀಠದ ಸಂಸ್ಥಾಪಕರಾದ ಪ್ರಪ್ರಥಮ ಮಹಿಳಾ ಮಹಾ ಜಗದ್ಗುರು ಡಾ.ಮಾತೆ ಮಹಾದೇವಿ ಹಾಗೂ ಪ್ರಥಮ ಬಸವ ಧರ್ಮ ಪೀಠಾಧ್ಯಕ್ಷರಾದ ಮಹಾ ಜಗದ್ಗುರು ಲಿಂಗಾನಂದ ಮಹಾಸ್ವಾಮೀಜಿಯವರು 1988 ರಲ್ಲಿ ಪ್ರಥಮ ಐತಿಹಾಸಿಕ ಶರಣ ಮೇಳವನ್ನು ಆರಂಭಿಸಿದರು. ಅದರಂತೆ 32 ವರ್ಷಗಳಿಂದ ಯಶಸ್ವಿಯಾಗಿ ಶರಣ ಮೇಳ ನಡೆದುಕೊಂಡು ಬರುತ್ತಿದೆ ಎಂದರು.
ಈ ವರ್ಷ ಜ.11, 12, 13 ಮತ್ತು 14 ರಂದು ನಡೆಯಲಿರುವ ಶರಣ ಮೇಳವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದು, ನೂತನ ಪೀಠಾಧ್ಯಕ್ಷ ಡಾ.ಮಾತೆ ಗಂಗಾದೇವಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಹರಿದ್ವಾರ ಪತಂಜಲಿ ಯೋಗ ಪೀಠದ ಸಂಸ್ಥಾಪಕ ಅಧ್ಯಕ್ಷ, ಯೋಗಗುರು ಬಾಬಾ ರಾಮದೇವ ಲಿಂಗೈಕ್ಯ ಮಾತಾಜಿಯವರ ಮೂರ್ತಿಯ ಅನಾವರಣ ಮಾಡಲಿದ್ದಾರೆ. ಅತಿಥಿಗಳಾಗಿ ಹಳೇ ಹುಬ್ಬಳ್ಳಿ ನೀಲಕಂಠೇಶ್ವರ ಮಠದ ಶಿವಶಂಕರ ಶಿವಾಚಾರ್ಯ ಸ್ವಾಮಿ, ಬಸವನ ಬಾಗೇವಾಡಿಯ ಗುರು ಸಂಗನಬಸವ ಸ್ವಾಮಿ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಪ್ರಭು ಚವ್ಹಾಣ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಆಗಮಿಸುವವರು. ಜ.14 ರಂದು ಸಾಮೂಹಿಕ ಇಷ್ಟಲಿಂಗ ಪೂಜೆ, ಸಮುದಾಯ ಪ್ರಾರ್ಥನೆ, ಪಥ ಸಂಚಲನ ಜರುಗಲಿದೆ ಎಂದರು.
ಪೌರತ್ವ (ತಿದ್ದುಪಡಿ) ಕಾಯ್ದೆಗೆ ಬೆಂಬಲವಿಲ್ಲ:
ರಾಷ್ಟ್ರದಲ್ಲಿ ಜಾರಿಯಾಗಿರುವ ಪೌರತ್ವ (ತಿದ್ದುಪಡಿ) ಕಾಯಿದೆಗೆ ಲಿಂಗಾಯತ ಧರ್ಮ ಮಹಾಸಭಾ ಬೆಂಬಲ ಸೂಚಿಸುವುದಿಲ್ಲ. ದೇಶದಲ್ಲಿ ಹಲವಾರು ವರ್ಷಗಳಿಂದ ವಾಸ ಮಾಡುತ್ತಿರುವ ಜನರನ್ನು ಕೇವಲ ದಾಖಲೆಗಳು ಇಲ್ಲವೆಂದು ಅವರನ್ನು ಭಾರತ ದೇಶದವರು ಅಲ್ಲ ಎಂದು ಹೇಳಲಾಗುವುದಿಲ್ಲ. ಈ ಹಿನ್ನಲೆಯಲ್ಲಿ ಮಹಾಸಭಾ ಜ. 10 ರಂದು ಸಭೆ ಕರೆಯಲಾಗಿದ್ದು, ಅಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ಬಗ್ಗೆ ಚರ್ಚೆ ನಡೆಸಿ, ಲಿಂಗಾಯತ ಧರ್ಮ ಮಹಾಸಭಾದ ಅಂತಿಮ ನಿರ್ಧಾರ ತಿಳಿಸಲಾಗುವುದು. ಅಲ್ಲದೇ ಪ್ರತ್ಯೇಕ ಲಿಂಗಾಯತ ಧರ್ಮದ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.