ಹುಬ್ಬಳ್ಳಿ: ಜನರ ಕಣ್ಣಿಗೆ ಖಾರದ ಪುಡಿ ಎರಚಿ ಸರಗಳ್ಳತನ ಮಾಡುತ್ತಿದ್ದ ಅಂತರ್ ರಾಜ್ಯ ಚಾಲಾಕಿ ಕಳ್ಳರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವಲ್ಲಿ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಕುಮಾರ ಸುಣಗಾರ (28), ಗೌರೇಶ ಕೇರಕರ್ (30) ಬಂಧಿತ ಆರೋಪಿಗಳು. ಗೌರೇಶ ಕೇರಕರ್ ಗೋವಾ ಪೊಲೀಸ್ ಸಿಬ್ಬಂದಿಯೊಬ್ಬರ ಮಗನಾಗಿದ್ದು, ಕರ್ನಾಟಕ, ಗೋವಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಸರಗಳ್ಳತನ ಮಾಡುತ್ತಿದ್ದರು.
ನಗರದಲ್ಲಿ ಸರಗಳ್ಳತನ ಮಾಡಿ ಪರಾರಿಯಾಗುತ್ತಿದ್ದಾಗ ವಿದ್ಯಾನಗರದ ಪೊಲೀಸರು ಚೇಸ್ ಮಾಡಿ, ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಂಧಿತರಿಂದ 100 ಗ್ರಾಂ ಚಿನ್ನ, ಒಂದು ಪಲ್ಸರ್ ಬೈಕ್ ಹಾಗೂ 4,15,500 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಸಿಬ್ಬಂದಿ ಭೀಮರಾವ್ ಹಚಡದ, ರಮೇಶ ಹಲ್ಲೆ, ರುದ್ರಪ್ ಹೊರಟ್ಟಿ ಇವರಿಗೆ 5 ಸಾವಿರ ನಗದನ್ನು ಬಹುಮಾನ ರೂಪದಲ್ಲಿ ಕೊಡಲಾಗುತ್ತದೆ ಎಂದು ಹು-ಧಾ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ್ ತಿಳಿಸಿದರು.
ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.