ಹುಬ್ಬಳ್ಳಿ: ರೌಡಿಸಂ ಫೀಲ್ಡ್ನಲ್ಲಿ ಹೆಸರು ಮಾಡುವ ಉದ್ದೇಶದಿಂದ ಪುಡಿ ರೌಡಿವೋರ್ವ ಕ್ಷುಲ್ಲಕ ಕಾರಣಕ್ಕೆ ತನ್ನದೇ ಏರಿಯಾದ ಅಮಾಯಕ ವ್ಯಕ್ತಿಯನ್ನು ಕೊಲೆ ಮಾಡಿರುವ ಪ್ರಕರಣ ನಗರದಲ್ಲಿ ನಡೆದಿದೆ.
ಹುಬ್ಬಳ್ಳಿಯ ಗಿರಣಿಚಾಳದ ನಿವಾಸಿ ರವಿ ಮುದ್ದಿನಕೇರಿ ಎಂಬಾತ ಕೊಲೆಯಾದ ವ್ಯಕ್ತಿ. ನಿನ್ನೆ ರವಿಯೊಂದಿಗೆ ಗಿರಿಣಿಚಾಳದ ಪುಡಿ ರೌಡಿ ವಿಜಯ್ ಆಲೂರ ಜಗಳ ತಗೆದು ಹಿಗ್ಗಾಮುಗ್ಗಾ ಥಳಿಸಿ ಎದೆಗೆ ಒದ್ದು ಕೊಲೆ ಮಾಡಲು ಯತ್ನಿಸಿದ್ದ ಎನ್ನಲಾಗ್ತಿದೆ. ಆದ್ರೆ ಗಂಭೀರವಾಗಿ ಗಾಯಗೊಂಡ ರವಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ರವಿ ಸಾವನ್ನಪ್ಪಿದ್ದಾನೆ.
ಆರೋಪಿ ವಿಜಯ ಆಲೂರು ಅಕ್ರಮ ಮರಳು ದಂಧೆಯಲ್ಲಿ ತೊಡಗಿಸಿಕೊಂಡಿದ್ದ. ಆದ್ರೆ ಇತ್ತೀಚಿಗೆ ಅಕ್ರಮ ಮರಳು ಸಾಗಣೆಗೆ ಕಡಿವಾಣ ಹಾಕಿದ ಹಿನ್ನೆಲೆ ದಾಬಾ ತೆರೆಯಲು ಸಿದ್ಧತೆ ನಡೆಸಿದ್ದ. ಜೊತೆಗೆ ವಿಜಯ್ ರೌಡಿಸಂ ಫೀಲ್ಡ್ನಲ್ಲಿ ಹವಾ ಉಂಟುಮಾಡಲು ಅಮಾಯಕನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಘಟನೆ ನಂತರ ಆರೋಪಿ ಪರಾರಿಯಾಗಿದ್ದು, ಕಿಮ್ಸ್ ಆಸ್ಪತ್ರೆಗೆ ಡಿಸಿಪಿ ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.