ಹುಬ್ಬಳ್ಳಿ : ಸಂಪೂರ್ಣ ಲಾಕ್‌ಡೌನ್ ತೆರಗೊಳಿಸಿದ ಬಳಿಕ ಅವಳಿ ನಗರದ ಬಸ್‌ಗಳಲ್ಲಿ ಸಂಚರಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಸಾರಿಗೆ ಸಂಸ್ಥೆಗೆ ಆಶಾವಾದ ಹುಟ್ಟಿಸಿದೆ. ಚಿಗರಿಯ ಸಂಚಾರ ಕೂಡ ಚಿಗುರೊಡೆದಿದೆ.
ಹುಬ್ಬಳ್ಳಿ ಮಹಾನಗರದಲ್ಲಿ ನಿತ್ಯ ಸರಾಸರಿ 65 ಸಾವಿರ ಜನ ಹಾಗೂ ಹು-ಧಾ ಸಾರಿಗೆ ಜೀವನಾಡಿ ಬಿಆರ್‌ಟಿಎಸ್ ಚಿಗರಿ ಬಸ್‌ಗಳಲ್ಲಿ 19 ಸಾವಿರ ಜನರು ಸಂಚರಿಸುತ್ತಿದ್ದಾರೆ. ಕೊರೊನಾ ಮುನ್ನ ಮತ್ತು ನಂತರದ ತಿಂಗಳಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬಂದರೂ ಲಾಕ್ ಡೌನ್ ತೆರವು ಬಳಿಕ ಸಮೂಹ ಸಾರಿಗೆ ವ್ಯವಸ್ಥೆ ಸುಧಾರಣೆ ಹಾದಿಯಲ್ಲಿರುವುದು ಕಂಡು ಬರುತ್ತಿದೆ.
ಕೊರೊನಾ ಮುನ್ನ ಹುಬ್ಬಳ್ಳಿ ಮಹಾನಗರ, ಉಪನಗರದಲ್ಲಿ ನಿತ್ಯ ಸರಾಸರಿ 1.25 ಲಕ್ಷ ಜನರು ಮತ್ತು ಬಿಆರ್‌ಟಿಎಸ್ ಬಸ್‌ಗಳಲ್ಲಿ 98 ಸಾವಿರ ಜನ ಪ್ರಯಾಣಿಸುತ್ತಿದ್ದರು. ಕೊರೊನಾ ನಂತರದಲ್ಲಿ ಲಾಕ್‌ಡೌನ್, ಮಾರ್ಗಸೂಚಿ ನಿರ್ಬಂಧ ಪರಿಣಾಮ ಸ್ಥಗಿತಗೊಂಡಿದ್ದ ಸಮೂಹ ಸಾರಿಗೆ ವ್ಯವಸ್ಥೆ, ಮಾರ್ಗಸೂಚಿ ಹಾಗೂ ಲಾಕ್‌ಡೌನ್ ಸಂಪೂರ್ಣ ತೆರವುಗೊಳಿಸಿದ ಬಳಿಕ ದಿನದಿಂದ ದಿನಕ್ಕೆ ಸುಧಾರಿಸುತ್ತಿದೆ.
ಸಮೂಹ ಸಾರಿಗೆ ಬಳಕೆಯಲ್ಲಿ ಬಡವರು, ಕೆಳ ಮಧ್ಯಮ ಸಮುದಾಯವರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಕಂಡು ಬಂದಿದೆ. ಆದರೆ, ಕೊರೊನಾ ನಂತರದಲ್ಲಿ ನೌಕರಸ್ಥರು ಮತ್ತು ಸ್ಥಿತಿವಂತರು ಸಮೂಹ ಸಾರಿಗೆಯಿಂದ ದೂರ ಉಳಿದಿರುವುದು ಪ್ರಯಾಣಿಕರ ಸಂಖ್ಯೆಯಲ್ಲಿನ ವ್ಯತ್ಯಾಸಗಳು ಮೇಲ್ನೋಟಕ್ಕೆ ಕಾಣಿಸುತ್ತವೆ. ವಿಶೇಷ ಅಂದ್ರೆ ₹15 ಸಾವಿರಕ್ಕಿಂತ ಕಮ್ಮಿ ಸಂಬಳ ಪಡೆಯುವರು ಸಾರಿಗೆ ಬಸ್‌ಗಳನ್ನೇ ಆಶ್ರಯಿಸಿರುವುದು ಕಂಡು ಬರುತ್ತಿದೆ.
ಸೆ.23ರಂದು 68 ಸಾವಿರ ಜನ ಪ್ರಯಾಣಿಕರು ಸಿಟಿ ಬಸ್‌ಗಳಲ್ಲಿ ಸಂಚರಿಸಿದ್ರೆ, ಹು-ಧಾ ಮಧ್ಯೆ ಬಿಆರ್‌ಟಿಎಸ್ ಬಸ್‌ಗಳಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ನಿತ್ಯ 19,154 ಪ್ರಯಾಣಿಕರು ಸಂಚರಿಸಿದ್ದಾರೆ. ಜೂನ್ ತಿಂಗಳಲ್ಲಿ 5195, ಜುಲೈ 4254, ಆಗಸ್ಟ್ ತಿಂಗಳಲ್ಲಿ 11288 ಪ್ರಯಾಣಿಕರು ಸಂಚರಿಸಿದ್ದಾರೆ.