ಹುಬ್ಬಳ್ಳಿ (ಧಾರವಾಡ): ಬೈಕ್ ರೈಡ್ ಮಾಡಿ ಆಯಾಸವಾಗಿದೆ ಅನ್ನೋವ್ರ ನಡುವೆ 65ನೇ ವಯಸ್ಸಿನ ವೃದ್ಧರೊಬ್ಬರು ಬೈಕ್ನಲ್ಲೇ ದೇಶದ 6,500 ಕಿ.ಮೀ ಪ್ರದೇಶದಲ್ಲಿ ಸುತ್ತಾಡಿ ಯುವಕರ ಹುಬ್ಬೇರುವಂತೆ ಮಾಡಿದ್ದಾರೆ.
ಹೌದು, ಹುಬ್ಬಳ್ಳಿಯ ಶಂಕರ ದೊಡ್ಡಮನಿ ಎಂಬುವವರು 14 ದಿನಕ್ಕೆ 6,500 ಕಿ.ಮೀ. ಬೈಕ್ ರೈಡ್ ಮಾಡುವ ಮೂಲಕ ಎಲ್ಲರ ಗಮನವನ್ನು ತಮ್ಮತ್ತ ಸೆಳೆಯುವಂತೆ ಮಾಡಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಹಾಗೂ ಚತುಷ್ಕೋನ ರಸ್ತೆಯ ಪರ್ಯಟನೆಯ ಉದ್ದೇಶದಿಂದ ಬೈಕ್ ರೈಡ್ ಹಮ್ಮಿಕೊಳ್ಳಲಾಗಿತ್ತು. ಡಿಸೆಂಬರ್ 20ರಂದು ಇವರು ತಮ್ಮ ರೈಡ್ ಪ್ರಾರಂಭ ಮಾಡಿದ್ದರು. ಈ ಕಾರ್ಯಕ್ಕೆ ಚೆನ್ನಮ್ಮ ಸರ್ಕಲ್ನಲ್ಲಿ ಎಸಿಪಿ ವಿನೋದ್ ಮುಕ್ತೆದಾರ ಚಾಲನೆ ನೀಡಿದ್ದರು. ನಿನ್ನೆಗೆ ಈ ಬೈಕ್ ರೈಡ್ ಮುಕ್ತಾಯಗೊಂಡಿದೆ.
ಶಂಕರ ದೊಡ್ಡಮನಿ ಹುಬ್ಬಳ್ಳಿಯಿಂದ ರಾಯಲ್ ಎನ್ಫೀಲ್ಡ್ ಬೈಕ್ ಮೂಲಕ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ದೆಹಲಿ, ಯುಪಿ, ಬಿಹಾರ, ಝಾರ್ಖಂಡ್, ಪಶ್ಚಿಮಬಂಗಾಳ, ಕೋಲ್ಕತ್ತಾ, ಒಡಿಶಾ, ಆಂಧ್ರ ಪ್ರದೇಶ, ತಮಿಳುನಾಡು ಹೀಗೆ ದೇಶಾದ್ಯಂತ 14 ದಿನಗಳಲ್ಲಿ 6,500 ಕಿಲೋ ಮೀಟರ್ ಕ್ರಮಿಸಿ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇವರ ಈ ಕಾರ್ಯಕ್ಕೆ ಕುಟುಂಬಸ್ಥರು, ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ ಘೋಷಿಸಿದ ಮೇಲೆ ಜೆಡಿಎಸ್-ಬಿಜೆಪಿಯಲ್ಲಿ ನಡುಕ ಶುರುವಾಗಿದೆ : ಸಿದ್ದರಾಮಯ್ಯ
ಇಳಿವಯಸ್ಸಿನಲ್ಲೂ ಇಷ್ಟೊಂದು ಉತ್ಸಾಹಭರಿತರಾಗಿರುವ ಇವರ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದ್ದು, ಹುಬ್ಬಳ್ಳಿಯ ಜನರು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದ್ದಾರೆ.