ಹುಬ್ಬಳ್ಳಿ : ತಾರಿಹಾಳ ಇಂಡಸ್ಟ್ರಿಯಲ್ ಏರಿಯಾದಲ್ಲಿ ಸ್ಪಾರ್ಕರ್ ತಯಾರಿಕೆ ಘಟಕಕ್ಕೆ ಬೆಂಕಿ ಹೊತ್ತಿದ್ದು, ಎಂಟು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ ತನಿಖೆಯ ನಂತರವೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಭುರಾಮ್ ಹೇಳಿದರು.
ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಇಂಡಸ್ಟ್ರಿಯಲ್ ಏರಿಯಾದಲ್ಲಿ ಅಗ್ನಿ ಅವಘಡ ನಡೆದಿದ್ದು, ಎಂಟು ಜನರು ಗಾಯಗೊಂಡಿದ್ದಾರೆ. ಫ್ಯಾಕ್ಟರಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದ್ದು, ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ತನಿಖೆಯ ನಂತರವೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಅಧಿಕಾರಿಗಳ ಕಾರ್ಯ ನ್ಯೂನತೆ ಕಂಡು ಬಂದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಕಂಪನಿ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗಿಲ್ಲ. ಕಂಪನಿಗೆ ಸಂಧಿಸಿದ ದಾಖಲೆಗಳನ್ನು ಹಾಜರು ಪಡಿಸಲು ಹೇಳಿದ್ದೆವೆ. ಈಗಾಗಲೇ ಪೊಲ್ಯೂಷನ್ ಕಂಟ್ರೋಲ್ ಬೋರ್ಡ್ ಅಡಿಯಲ್ಲಿ ಕೇಸ್ ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಅಗ್ನಿ ಅವಘಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಕಂಪನಿ ನಿಯಮ ಉಲ್ಲಂಘನೆ ಬಗ್ಗೆ ಮಾಹಿತಿ ಲಭ್ಯವಾಗಬೇಕಿದೆ. ಈ ಬಗ್ಗೆ ಸಂಭಂದಪಟ್ಟವರನ್ನ ವಶಕ್ಕೆ ಪಡೆದು ತನಖೆ ನಡೆಸುತ್ತೆವೆ ಎಂದರು. ಮೇಲ್ನೋಟಕ್ಕೆ ಅಧಿಕೃತ ಎಂದು ಕಂಡು ಬರುತ್ತಿಲ್ಲ. ಎರಡು ಮೂರು ಇಲಾಖೆಯಲ್ಲಿ ಈ ಕಂಪನಿಯ ಸೂಕ್ತ ದಾಖಲೆಗಳು ಕಂಡುಬರುತ್ತಿಲ್ಲ.
ನಾಳೆ ಬೆಳಿಗ್ಗೆ ಒಳಗಡೆ ಎಲ್ಲಾ ದಾಖಲೆಗಳನ್ನು ನೀಡಬೇಕೆಂದು ಸೂಚಿಸಲಾಗಿದೆ. ನಮ್ಮ ಇಲಾಖೆಯ ಅಧಿಕಾರಿಗಳ ಕಾರ್ಯ ನ್ಯೂನತೆ ಕಂಡು ಬಂದರೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೆನೆ ಎಂದು ಅವರು ಹೇಳಿದರು.
ತಪ್ಪಿತಸ್ಥರ ವಿರುದ್ಧ ಕ್ರಮದ ಭರವಸೆ: ಕಂಪನಿ ಮೇಲೆ ದೂರು ದಾಖಲು ಮಾಡಿಕೊಳ್ಳುತ್ತೆವೆ. ಕಂಪನಿಯಲ್ಲಿ ಸ್ಫೋಟಕ ವಸ್ತುಗಳನ್ನು ಬಳಕೆ ಮಾಡಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಲೋಕೇಶಕುಮಾರ್ ಜಿ. ಹೇಳಿದರು.
ಅಗ್ನಿ ದುರಂತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಇಲ್ಲಿ ಏನೇನೂ ನಿಯಮಗಳನ್ನು ಉಲ್ಲಂಘಿಸಿಲಾಗಿದೆ ಈ ಬಗ್ಗೆ ತನಿಖೆ ನಡೆಯುತ್ತಿದೆ. ಮಾಲೀಕರು ಯಾರಿಗೆ ಬಾಡಿಗೆ ಕೊಡುತ್ತಿದ್ದೇವೆ ಎಂಬುದರ ಬಗ್ಗೆ ತಿಳಿದುಕೊಂಡಿಲ್ಲ.
ಅನಧಿಕೃತ ಕಂಪನಿ ನಡೆಸಲು ಹೇಗೆ ಬಾಡಿಗೆ ಕೊಟ್ಟರು, ಇದಕ್ಕೆ ಕಟ್ಟಡದ ಮಾಲೀಕರು ಕೂಡ ಹೊಣೆಯಾಗುತ್ತಾರೆ ಎಂದರು.ಈ ಬಗ್ಗೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಯುತ್ತದೇ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಗಳನ್ನು ಜರುಗಿಸಲಾಗುವುದು ಎಂದು ಅವರು ಹೇಳಿದರು.
ಸ್ಥಳೀಯರ ಸಮಯ ಪ್ರಜ್ಞೆಯಿಂದ ಜೀವ ಉಳಿದಿವೆ: ನಡೆಯಬಾರದಂತ ಘಟನೆ ನಡೆದಿದೆ. ಈ ಫ್ಯಾಕ್ಟರಿ ಕೇವಲ 15 ದಿನದ ಹಿಂದಷ್ಟೆ ಆರಂಭವಾಗಿದೆ. ಈ ಫ್ಯಾಕ್ಟರಿ ಅನಧಿಕೃತವಾಗಿದೆ. ಯಾರಿಗೂ ತಿಳಿಸದೇ ಆರಂಭ ಮಾಡಲಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ್ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಹೇಳಿಕೆ ಕೊಟ್ಟರು.
ಘಟನೆಯಿಂದ ಫ್ಯಾಕ್ಟರಿ ಮಾಲೀಕ ತಬ್ಸುಮ್ ಶೇಕ್ ಹೆದರಿ ತಲೆ ಮೆರಿಸಿಕೊಂಡಿದ್ದಾನೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ದೊಡ್ಡ ಅಪಾಯ ತಪ್ಪಿದೆ. ಹೀಗಾಗಿ ಹಲವರ ಪ್ರಾಣ ಉಳಿದಿದೆ. ಘಟನೆ ಕುರಿತಂತೆ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ : ಸ್ಪಾರ್ಕರ್ ತಯಾರಿಕಾ ಘಟಕದಲ್ಲಿ ಅಗ್ನಿ ಅವಘಡ: ನಾಲ್ವರು ಕಾರ್ಮಿಕರ ಸಾವಿನ ಶಂಕೆ!