ಹುಬ್ಬಳ್ಳಿ: ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಸದಸ್ಯರ ಆಡಳಿತವನ್ನು ಅವರ ಪತಿ ಅಥವಾ ಇತರ ಪುರುಷ ಸಂಬಂಧಿಕರೇ ನಿರ್ವಹಿಸುತ್ತಿರುವುದು ಬಹಿರಂಗ ಸತ್ಯ. ಈ ಅಪವಾದಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯೂ ಹೊರತಾಗಿಲ್ಲ. ಮಹಿಳಾ ಸದಸ್ಯೆಯು ಸಹಿ ಹಾಕಲಷ್ಟೇ ಸೀಮಿತವಾಗಿದ್ದು, ಪುರುಷ ಅಥವಾ ಆಕೆಯ ಸಂಬಂಧಿಕರದ್ದೇ ಪಾಲಿಕೆಯಲ್ಲಿ ದರ್ಬಾರ್ ನಡೆಯುತ್ತಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಶೇ. 50ಕ್ಕೂ ಹೆಚ್ಚು ಸದಸ್ಯೆಯರಿದ್ದರೂ ಇವರಲ್ಲಿ ಹೆಚ್ಚಿನವರ ಅಧಿಕಾರವನ್ನು ಅವರ ಪತಿ ಅಥವಾ ಮಕ್ಕಳು ನಿರ್ವಹಿಸುತ್ತಿದ್ದಾರೆ. ಮೊನ್ನೆ-ಮೊನ್ನೆಯಷ್ಟೆೇ ನಗರದ ಖಾಸಗಿ ಹೋಟೆಲ್ನಲ್ಲಿ ಎಲ್ ಆ್ಯಂಡ್ ಟಿ ಕಂಪನಿಯವರು ಕರೆದಿದ್ದ ನೀರು ಸರಬರಾಜು ನಿರ್ವಹಣೆ ಸಭೆಯಲ್ಲಿ ಪಾಲಿಕೆ ಸದಸ್ಯೆಯರೊಂದಿಗೆ ಅವರ ಪತಿ ಇಲ್ಲವೇ ಮಕ್ಕಳು ಅಥವಾ ತಂದೆ ಭಾಗವಹಿಸಿದ್ದು ಇದಕ್ಕೊಂದು ಸ್ಪಷ್ಟ ನಿದರ್ಶನ.
82 ಪಾಲಿಕೆ ಸದಸ್ಯರನ್ನು ಆ ಸಭೆಗೆ ಆಹ್ವಾನಿಸಲಾಗಿತ್ತು. ಆದರೆ, ಸದಸ್ಯೆಯರ ಸಂಬಂಧಿಕರು ಸೇರಿ 115 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಈ ಹಿಂದೆಯೂ ಪತಿಯಂದಿರೇ ವಾರ್ಡ್‌ಗಳಲ್ಲಿ ಅಧಿಕಾರ ಚಲಾಯಿಸುತ್ತಿದ್ದರು. ಈ ವ್ಯವಸ್ಥೆ ಈಗಲೂ ಮುಂದುವರಿದಿದೆ. ಕೆಲ ವಾರ್ಡ್‌ಗಳಲ್ಲಿ ಸಾಮಾನ್ಯ ಸಭೆಗಳಿಗೆ ಹಾಜರಾಗುವುದು ಹಾಗೂ ಕಡತಗಳಿಗೆ ಸಹಿ ಮಾಡುವುದಷ್ಟೇ ಸದಸ್ಯೆಯರ ಕಾರ್ಯವಾಗಿ ಉಳಿದುಕೊಂಡಿದೆ.
ಉತ್ಸವ ಮೂರ್ತಿಗಳಷ್ಟೇ: ಅಧಿಕಾರಿಗಳಿಗೂ ಸಹ ಈ ಅವ್ಯವಸ್ಥೆ ಕರಗತವಾದಂತೆ ಆಗಿದೆ. ಅವರು ಸಹ ವಾರ್ಡ್‌ಗಳಲ್ಲಿ ಕೆಲಸಗಳಿದ್ದರೆ ನೇರವಾಗಿ ಅವರ ಪತಿಯ ಮೊಬೈಲ್‌ಗೆ ಕರೆ ಮಾಡಿ ಚರ್ಚಿಸುತ್ತಾರೆ. ಒಂದು ರೀತಿಯಲ್ಲಿ ಹೆಚ್ಚಿನ ಸದಸ್ಯೆಯರು ಉತ್ಸವ ಮೂರ್ತಿಯಂತೆಯೇ ಆಗಿದ್ದಾರೆ. ಅವರು ನೇರವಾಗಿ ಯಾವುದೇ ಅಧಿಕಾರ ಚಲಾಯಿಸದಂಥ ದುಸ್ಥಿತಿ ಇದೆ. ಸಾಮಾನ್ಯ ಸಭೆಗಳಲ್ಲಿಯೂ ಅವರು ತಮ್ಮ ವಾರ್ಡ್‌ಗಳ ಸಮಸ್ಯೆ ಬಗ್ಗೆ ಧ್ವನಿ ಎತ್ತರಾರರು!.
ಕೆಲವರಂತೂ ತಮ್ಮ ಅಧಿಕಾರದ ಐದು ವರ್ಷಗಳಲ್ಲಿ ಒಮ್ಮೆಯೂ ಮಾತನಾಡಿದ್ದೇ ಇಲ್ಲ. ಮಹಾನಗರ ಪಾಲಿಕೆ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯ ಪೂರ್ವಭಾವಿ ಸಭೆಯಲ್ಲಿಯೂ ಕೆಲ ಸದಸ್ಯೆಯರ ಪತಿಯರೇ ಪಾಲ್ಗೊಂಡಿದ್ದರು. ಆಡಳಿತ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಎರಡೂ ಪಕ್ಷಗಳಲ್ಲಿ ಈ ಸಮಸ್ಯೆಯಿದೆ.
ಎರಡೂ ಪಕ್ಷಗಳಲ್ಲಿ ಮಹಿಳೆಯರು ಪಾಲಿಕೆ ಸದಸ್ಯೆಯರಾಗಿ ಚುನಾಯಿತರಾದರೂ ಅಧಿಕಾರದಿಂದ ವಂಚಿತರಾಗಿರುವುದು ಬಹಿರಂಗ ಸತ್ಯ. ಮಹಾನಗರ ಪಾಲಿಕೆಯ ಆಡಳಿತ ವ್ಯವಸ್ಥೆ, ಕಾಯ್ದೆ ಹಾಗೂ ಮತ್ತಿತರ ವಿಷಯಗಳ ಬಗ್ಗೆ ಸದಸ್ಯೆಯರಿಗೆ ತರಬೇತಿ ನೀಡುವ ಅಗತ್ಯವಿದೆ. ಇಲ್ಲದಿದ್ದರೆ, ಮಹಿಳಾ ಮೀಸಲಾತಿಗೆ ಅರ್ಥವೇನು ಎಂಬುದು ಸಾರ್ವಜನಿಕರ ಪ್ರಶ್ನೆ.
ಇದನ್ನೂ ಓದಿ: ಕಲಬುರಗಿ ಮನಪಾ: ಉರ್ದು ನಾಮಫಲಕ ತೆರವುಗೊಳಿಸುವಂತೆ ಆಯುಕ್ತರಿಗೆ ಸೂಚನೆ