ಹುಬ್ಬಳ್ಳಿ: ಆತ ಇನ್ನೂ ಚಿಕ್ಕ ಬಾಲಕ. ತಾನು ಮಾಡಿರುವ ಕೆಲಸದಿಂದ ದೇಶವನ್ನೇ ತನ್ನತ್ತ ನೋಡುವಂತೆ ಮಾಡಿದ್ದಾನೆ. ಈ ವಯಸ್ಸಿನಲ್ಲಿ ಇದು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರ ನೀಡುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾನೆ.
ಪುಸ್ತಕ ಇಲ್ಲದೇ ಪಟಾಪಟ್ ಅಂತಾ ಮಾತನಾಡುವ ಈ ಬಾಲಕನ ಹೆಸರು ಅದ್ವೈತ್ ಸರದೇಶಮುಖ. ಸತ್ತೂರಿನ ವನಸಿರಿ ನಗರ ನಿವಾಸಿ. ಈತನಿಗಿನ್ನೂ ಮೂರು ವರ್ಷ 10 ತಿಂಗಳು ವಯಸ್ಸು. ಚಿಕ್ಕ ವಯಸ್ಸಿನಲ್ಲಿಯೇ ಅರಳು ಹುರಿದಂತೆ ಮಾತನಾಡುವ ಈತ, ತನ್ನಲ್ಲಿರುವ ಅಪಾರವಾದ ಜ್ಞಾಪಕ ಶಕ್ತಿ ಹಾಗೂ ಸಾಮಾನ್ಯ ಜ್ಞಾನವನ್ನು ಪರಿಚಯಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್-2020ರಲ್ಲಿ ತನ್ನ ಹೆಸರನ್ನು ದಾಖಲಿಸಿದ್ದಾನೆ.
ವಿಶ್ವದ ಏಳು ಖಂಡಗಳು, ರಾಜ್ಯಗಳ ರಾಜಧಾನಿ ಹೆಸರು, ಸೌರ ಮಂಡಲದ ಗ್ರಹಗಳ ವಿವರವನ್ನು ಈ ಬಾಲಕ ಪಟ ಪಟನೇ ಹೇಳುತ್ತಾನೆ. ದೇಶದ ವಿವಿಧ ರಾಜ್ಯ, ಜಿಲ್ಲೆಗಳು, ಕಾಲಚಕ್ರ, 28 ನಕ್ಷತ್ರ, 1ರಿಂದ 100ರವರೆಗೆ ಕನ್ನಡ ಮತ್ತು ಇಂಗ್ಲಿಷ್ ಸಂಖ್ಯೆ, 1ರಿಂದ 50ರವರೆಗೆ ಹಿಂದಿ ಸಂಖ್ಯೆ, ರಾಶಿಗಳು, 12 ವಿವಿಧ ಶ್ಲೋಕಗಳು, ವಿಷ್ಣುವಿನ ದಶಾವತಾರ, ಇಂಗ್ಲಿಷ್ ಕವಿತೆ, ಕನ್ನಡದ ಸಣ್ಣ ಕತೆಗಳು, ದೇಶದ ಪ್ರಧಾನಿ ಮತ್ತು ಮಂತ್ರಿಗಳ ಹೆಸರುಗಳನ್ನು ಹೇಳುತ್ತಾನೆ.
ಈತನ ತಾಯಿ ಶ್ವೇತಾ ಸರದೇಶಮುಖ ಖಾಸಗಿ ಶಾಲೆ ಶಿಕ್ಷಕಿ. ತಂದೆ ವಿನಾಯಕ ಸರದೇಶಮುಖ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು, ಮಗನಲ್ಲಿರುವ ಅಗಾಧವಾದ ಪ್ರತಿಭೆ ಗುರುತಿಸಿ ಬೆಳಕಿಗೆ ತಂದಿದ್ದು, ಮಗನ ಸಾಧನೆಗೆ ಖುಷಿ ವ್ಯಕ್ತಪಡಿಸಿದ್ದಾರೆ.
ಅದ್ವೈತ್ ಸರದೇಶಮುಖ ಹೆಸರಲ್ಲಿ ಯುಟ್ಯೂಬ್ ಚಾನಲ್ ಕೂಡ ಇದೆ. ವಿವಿಧ ಹಾಡು ಹಾಡುವುದು, ಚಿತ್ರ ಕಲೆಯಲ್ಲೂ ಬಾಲಕ ತೊಡಗಿಸಿಕೊಂಡಿದ್ದು, ಇನ್ನಷ್ಟು ಸಾಧನೆ ಮಾಡಲಿ ಎಂಬುದು ನಮ್ಮ ಆಶಯ.