ಹುಬ್ಬಳ್ಳಿ : ಈಶ್ವರಪ್ಪನವರ ಬಗ್ಗೆ ನಾನೇನು ಹೆಚ್ಚು ಹೇಳೋಕೆ ಹೋಗಲ್ಲ. ಓರ್ವ ಡಿಸಿಎಂ ಆಗಿದ್ದವರು. ಈ ರೀತಿ ಹೇಳಿಕೆ ನೀಡಬಾರದಿತ್ತು. ಯಾವಾಗ ಅವರಿಗೆ ರಾಜಕೀಯ ಅಭದ್ರತೆ ಕಾಡುತ್ತೋ ಆ ಸಮಯದಲ್ಲಿ ಈ ರೀತಿ ಮಾತನಾಡ್ತಾರೆ ಎಂದು ಮಾಜಿ ಸಚಿವ ಹೆಚ್ ಎಂ ರೇವಣ್ಣ ಅವರು ಈಶ್ವರಪ್ಪ ವಿರುದ್ದ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾತನಾಡಿದ ಅವರು, ಹಿಂದೆಯೂ ರಾಯಣ್ಣ ಬ್ರಿಗೇಡ್ ಮಾಡಿದ್ದರು. ಇವಾಗ ಸಂಪುಟದಿಂದ ಹಿರಿಯರನ್ನ ಕೈ ಬಿಡ್ತಾರೆ ಅನ್ನೋ ಸುದ್ದಿ ಇದೆ. ಹೀಗಾಗಿ, ದೇಶಭಕ್ತಿ ಉಕ್ಕಿ ಹರಿದಿದೆ. ತಮ್ಮ ಸ್ಥಾನ ಉಳಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ.
ರಾಜಕೀಯವಾಗಿ ಸಮಸ್ಯೆ ಆದಾಗ ಇವರಿಗೆ ರಾಯಣ್ಣ ನೆನಪಿಗೆ ಬಂದ್ರು. ಅಲ್ಲದೆ ಮಹಾನ್ ದೇಶಭಕ್ತನ ರೀತಿ ಮಾತನಾಡುತ್ತಾರೆ. ತಮ್ಮ ಉಳಿವಿಗಾಗಿ ಏನ್ ಮಾಡಬೇಕೋ ಅದನ್ನ ಮಾಡ್ತಿದ್ದಾರೆ ಎಂದು ಹೇಳಿದರು.
ಹಿಜಾಬ್ ವಿಚಾರದ ಬಗೆಗೆ ಪ್ರತಿಕ್ರಿಯಿಸಿದ ಅವರು, ಹಿಜಾಬ್ ವಿಚಾರ ನ್ಯಾಯಾಲಯದಲ್ಲಿದೆ. ಹಾಗಾಗಿ, ಆ ಬಗ್ಗೆ ಹೆಚ್ಚು ಮಾತನಾಡಲ್ಲ. ಆದರೆ, ಹಿಜಾಬ್ ವಿವಾದವನ್ನು ಈ ಮಟ್ಟಿಗೆ ಬೆಳೆಯೋಕೆ ಬಿಡಬಾರದಿತ್ತು. ಇದರಲ್ಲಿ ಸರ್ಕಾರದ ನ್ಯೂನ್ಯತೆ ಇದೆ.
ಬಿಜೆಪಿಯವರಿಗೆ ತಮ್ಮ ಸರ್ಕಾರದ ಸಾಧನೆ ಕೇಳಿದ್ರೆ ಏನೂ ಮಾತನಾಡಲ್ಲ. ಕೇವಲ ಜನರ ಭಾವನೆ ಮೇಲೆ ರಾಜಕೀಯ ಮಾಡುತ್ತಾರೆ. ಜನರ ದಿಕ್ಕನ್ನ ತಪ್ಪಿಸೋ ಕೆಲಸ ಮಾಡುತ್ತಿದ್ದಾರೆ ಎಂದರು.
ಒಬಿಸಿ ಮೀಸಲಾತಿ ರದ್ದತಿಯ ಬಗ್ಗೆ ಪ್ರತಿಕ್ರಿಯಿಸಿ, ಒಬಿಸಿಗೆ ಹಿಂದಿನಿಂದಲೂ ರಕ್ಷಣೆ ಇತ್ತು. ಅಲ್ಲದೆ ಸಮಾನತೆಗೋಸ್ಕರ ಈ ಮೀಸಲಾತಿ ಇತ್ತು. ಒಬಿಸಿಗೆ ಮೀಸಲಾತಿ ಇಲ್ಲವಾದರೆ ಹಿಂದುಳಿದ ವರ್ಗದವರಿಗೆ ಅನ್ಯಾಯವಾಗಲಿದೆ. ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ತಂದು ಮೀಸಲಾತಿ ಉಳಿಸಬೇಕು ಎಂದು ಹೇಳಿದ್ದಾರೆ.
ಓದಿ : ಬಿಜೆಪಿ ಬಿಡಲ್ಲ, ಅನಿವಾರ್ಯವಾದ್ರೆ ರಾಜಕೀಯ ಬಿಡ್ತೀನಿ : ಶಾಸಕ ಸೋಮಶೇಖರ್ ರೆಡ್ಡಿ