ಹುಬ್ಬಳ್ಳಿ: ನಾವು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಪಕ್ಷದ ಟಿಕೆಟ್ ಕೇಳಿದ್ದೆವು. ಆದರೆ ಹೈಕಮಾಂಡ್ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ ಎಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಾನಂದ ಬೆಂತೂರ ಬೇಸರ ವ್ಯಕ್ತಪಡಿಸಿದ್ದಾರೆ.
ಕುಂದಗೋಳದಲ್ಲಿ ಮಾತನಾಡಿದ ಅವರು, ಈಗಾಗಲೇ ನಾವು 6 ಮಂದಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದೇವೆ. ನಾವು ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ. ಕ್ಷೇತ್ರದಲ್ಲಿ ಯಾವುದೇ ರೀತಿ ಅನುಕಂಪದ ಅಲೆ ಇಲ್ಲ. ಹಾಗಾಗಿ ಹೊಸಬರಿಗೆ ಅವಕಾಶ ಕೊಡಿ ಎಂದು ಹೈಕಮಾಂಡ್ಗೆ ಮನವಿ ಸಲ್ಲಿಸಿದ್ದೆವು. ಆದರೆ, ಹೈಕಮಾಂಡ್ನಿಂದ ಮನವೊಲಿಸುವ ಯತ್ನ ನಡೆದಿದೆ ಎಂದರು.
ಇಂದು 8 ಜನ ಪಕ್ಷೇತರರು ಸಭೆ ಸೇರಿ ಚರ್ಚೆ ನಡೆಸಲಿದ್ದೇವೆ. ಈ ಪೈಕಿ ಓರ್ವರು ಮಾತ್ರ ಚುನಾವಣೆ ಕಣದಲ್ಲಿ ಉಳಿಯಲಿದ್ದಾರೆ. ಸಚಿವ ಡಿ ಕೆ ಶಿವಕುಮಾರ್ ಮೈಸೂರು ಭಾಗದಲ್ಲಿ ಯಜಮಾನಿಕೆ ಮಾಡಲಿ. ನಾವು ಅವರ ಮಾತನ್ನು ಕೇಳುವ ಪ್ರಶ್ನೆಯೇ ಇಲ್ಲವೆಂದು ಬೆಂತೂರ ಹೇಳಿದರು.