ಧಾರವಾಡ: ಕೊರೊನಾ ಎರಡನೇ ಅಲೆ ಇರುವಾಗಲೇ ರಾಜ್ಯದಲ್ಲಿ ಮೂರನೇ ಅಲೆ ಆತಂಕ ಎದುರಾಗಿದೆ. ಹೀಗಾಗಿ ಧಾರವಾಡದ ಕಿರಾಣಿ ವರ್ತಕ ಸಂಘದ ವ್ಯಾಪಾರಸ್ಥರು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ.
ಕೊರೊನಾ ಮೂರನೇ ಅಲೆ ಆತಂಕದ ಹಿನ್ನೆಲೆ ಕಿರಾಣಿ ವರ್ತಕರು ಬೆಳಗ್ಗೆ 7 ರಿಂದ ಸಂಜೆ 7 ಗಂಟೆಯ ವರೆಗೆ ಮಾತ್ರ ಅಂಗಡಿ ತೆರೆದು ರಾತ್ರಿ ಶಾಪ್ಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ. ಧಾರವಾಡದಲ್ಲಿ ಸುಮಾರು 250 ಕಿರಾಣಿ ಅಂಗಡಿಗಳಿದ್ದು, ಕೊರೊನಾ ಮಾರ್ಗಸೂಚಿಗಳ ಪ್ರಕಾರ ಅಂಗಡಿಗಳನ್ನು ಓಪನ್ ಮಾಡಲಾಗಿತ್ತು. ಆದರೆ, ಮತ್ತೆ ತಜ್ಞರು ಮೂರನೇ ಅಲೆಯ ಆತಂಕ ವ್ಯಕ್ತಪಡಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಇಂತಹ ನಿರ್ಧಾರ ಕೈಗೊಂಡಿದ್ದಾರೆ.
ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ಶಿವಮೂರ್ತಿ ಕೋಟೂರು ಮಾತನಾಡಿ, ಎರಡನೇ ಅಲೆಯಲ್ಲಿ ಅಪಾರ ಸಾವು - ನೋವುಗಳು ಸಂಭವಿಸಿದ್ದು, ಗಣ್ಯ ವ್ಯಾಪಾರಸ್ಥರನ್ನು ಕಳೆದುಕೊಂಡಿದ್ದೇವೆ. ಇದೀಗ ಮೂರನೇ ಅಲೆ ಬರುತ್ತಿದೆ. ಹೀಗಾಗಿ ಸಾರ್ವಜನಿಕರು ಅನಗತ್ಯವಾಗಿ ಓಡಾಡಬಾರದು, ತಮ್ಮಗೆ ಬೇಕಾದ ವಸ್ತುಗಳನ್ನು ಒಮ್ಮೆ ಖರೀದಿಸಿ ಕೊರೊನಾ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.