ಹುಬ್ಬಳ್ಳಿ: ವಿಧಾನಸಭೆ ಶಾಸಕರು, ವಿಧಾನ ಪರಿಷತ್ ಸದಸ್ಯರಿಗೆ ಮಾತ್ರ ಸೀಮಿತವಾಗಿದ್ದ ರೆಸಾರ್ಟ್ ರಾಜಕಾರಣ ಇದೀಗ ಗ್ರಾಮ ಪಂಚಾಯತ್ ಸದಸ್ಯರ ಮಟ್ಟಕ್ಕೂ ಬಂದು ನಿಂತಿದೆ. ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾದ ಬೆನ್ನಲ್ಲೇ ಪಂಚಾಯತ್ಗಳಲ್ಲಿ ರೆಸಾರ್ಟ್ ರಾಜಕೀಯ ಗರಿಗೆದರಿದೆ.
ಧಾರವಾಡ ಜಿಲ್ಲೆಯ ಏಳು ತಾಲೂಕಿನಲ್ಲಿ ಗ್ರಾಮ ಪಂಚಾಯತ್ನ ಮೊದಲ ಆವಧಿಗೆ ಜಿಲ್ಲಾಡಳಿತ ಮೀಸಲಾತಿ ಪ್ರಕಟಿಸಿದೆ. ಅಲ್ಲದೆ ಫೆ. 5 ರೊಳಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬೇಕು. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣಾ ಆಯೋಗ ಸೂಚನೆ ನೀಡಿದೆ. ಹೀಗಾಗಿ ಜಿಲ್ಲಾಡಳಿತ ಅಧಿಕಾರಿಗಳನ್ನು ನೇಮಕಗೊಳಿಸಿ, ಚುನಾವಣೆ ಪ್ರಕ್ರಿಯೆಗೆ ಸಕಲ ಸಿದ್ಧತೆ ನಡೆಸಿದೆ. ಈ ಹಿನ್ನೆಲೆ ಸ್ಥಾನಕ್ಕೆ ಪೈಪೋಟಿ ನಡೆಸಿರುವ ಸದಸ್ಯರು, ತಮ್ಮ ಬೆಂಬಲಿತ ಸದಸ್ಯರೊಂದಿಗೆ ರೆಸಾರ್ಟ್ ರಾಜಕೀಯ ಆರಂಭಿಸಿದ್ದಾರೆ ಎನ್ನಲಾಗಿದೆ.
ಇನ್ನು ಜಿಲ್ಲೆಯ 7 ತಾಲೂಕಿನಲ್ಲಿ ಕೂಡ ರೆಸಾರ್ಟ್ ರಾಜಕೀಯ ಜೋರಾಗಿದೆ ಎನ್ನಲಾಗಿದೆ. ಹುಬ್ಬಳ್ಳಿ, ಧಾರವಾಡ, ಅಣ್ಣಿಗೇರಿ, ಕುಂದಗೋಳ, ಕಲಘಟಗಿ ಅಳ್ನಾವರ ಹಾಗೂ ನವಲಗುಂದ ತಾಲೂಕಿನ ಗ್ರಾಮಗಳಲ್ಲಿನ ಸದಸ್ಯರು ತಮ್ಮ ಬೆಂಬಲಿತ ಸದಸ್ಯರೊಂದಿಗೆ ಗೋವಾ ಸೇರಿದಂತೆ ಐತಿಹಾಸಿಕ ಸ್ಥಳಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಕಳೆದ ಹಲವು ದಿನಗಳಿಂದ ಗ್ರಾಮಗಳಲ್ಲಿ ಗುಂಪು ಕಟ್ಟಿಕೊಂಡು ತಂಡೋಪತಂಡವಾಗಿ ಸದಸ್ಯರು ತೊಡಗಿದ್ದು, ಸದಸ್ಯರ ನಡೆಯ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಗ್ರಾಮದ ಅಭಿವೃದ್ಧಿಗೆ ಸದಸ್ಯರು ಶ್ರಮಿಸಬೇಕು. ಚುನಾವಣೆ ವೇಳೆ ನೀಡಿದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಆದ್ರೆ, ಅವೆಲ್ಲವನ್ನು ಗೆದ್ದ ಖುಷಿಯಲ್ಲಿ ಮರೆತಿರುವ ಸದಸ್ಯರು, ಅಧಿಕಾರದ ಆಸೆಗಾಗಿ ರೆಸಾರ್ಟ್ ರಾಜಕಾರಣಕ್ಕೆ ಮುಂದಾಗಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಜನ ಪ್ರಶ್ನಿಸಿದ್ದಾರೆ.