ಹುಬ್ಬಳ್ಳಿ: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆಯಡಿ ಐಸಿಐಸಿಐ ಲಂಬಾರ್ಡ್ ಜನರಲ್ ಇನ್ಸೂರೆನ್ಸ್ ಕಂಪನಿ ರೈತರಿಂದ ಕೋಟ್ಯಾಂತರ ರೂ.ಪಡೆದು ವಂಚಿಸಿದೆ ಎಂದು ಆರೋಪಿಸಿ ನವಲಗುಂದ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎನ್.ಹೆಚ್.ಕೋನರೆಡ್ಡಿ ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ಧಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅತಿವೃಷ್ಟಿ, ನೈಸರ್ಗಿಕ ವಿಕೋಪ, ಹವಾಮಾನ ವೈಪರೀತ್ಯದಿಂದ ಬೆಳೆ ಹಾನಿಯಾದರೆ ಅಥವಾ ಮಳೆಯಿಲ್ಲದೆ ಹಾನಿಯಾದರೆ ವಿಮಾ ಕಂಪನಿ ರೈತರಿಗೆ ಪರಿಹಾರ ನೀಡಬೇಕು. ಆದರೆ, ಗೋಕುಲ ರಸ್ತೆಯಲ್ಲಿನ ಐಸಿಐಸಿಐ ಲಂಬಾರ್ಡ್ ಜನರಲ್ ಇನ್ಸೂರೆನ್ಸ್ ಖಾಸಗಿ ಕಂಪನಿ ಕೇಂದ್ರ ಹಾಗು ರಾಜ್ಯ ಸರ್ಕಾರದಿಂದ ರೈತರ ಸಹಾಯ ಧನ ಹಾಗು ರೈತರ ವಂತಿಗೆ ಸೇರಿ ಬೆಳೆ ವಿಮೆ ಹೆಸರಿನಲ್ಲಿ ಪ್ರತಿ ವರ್ಷ ಬ್ಯಾಂಕ್ಗಳ ಮೂಲಕ ಕೋಟ್ಯಂತರ ರೂ. ವಿಮಾ ಕಂಪನಿಗೆ ಭರಣಾ ಮಾಡಿಕೊಂಡಿದೆ.
ಸರ್ಕಾರದ ಆದೇಶದ ಪ್ರಕಾರ, ನ.30 ರವರೆಗೆ ಬೆಳೆ ವಿಮೆ ತುಂಬಲು ಅವಕಾಶ ನೀಡಿದರೂ, ಕಂಪನಿ ಮಾತ್ರ ನ.20 ರವರೆಗೆ ಮಾತ್ರ ಪರಿಹಾರ ನೀಡುತ್ತೇವೆ ಎಂದು ಹೇಳುತ್ತಿದೆ. ಕಂಪನಿ ರೈತರಿಂದ ಹಣ ತುಂಬಿಸಿಕೊಂಡು 2018–2021ರವರೆಗೆ ಪರಿಹಾರ ನೀಡದೆ ವಂಚಿಸಿದೆ ಎಂದು ದೂರಿದರು.
ಇನ್ನು ಒಂದು ಗ್ರಾಮದಿಂದ 100 ರೈತರು ಅರ್ಜಿ ಸಲ್ಲಿಸಿದರೂ, ಕೇವಲ 5 ಮಂದಿ ರೈತರಿಗೆ ಮಾತ್ರ ಪರಿಹಾರ ನೀಡಲಾಗುತ್ತಿದೆ. ಇದರಿಂದ ಉಳಿದ ರೈತರಿಗೆ ವಂಚನೆಯಾಗುತ್ತಿದೆ. ಈ ಬಗ್ಗೆ ಕಾನೂನು ಪ್ರಕಾರ ತನಿಖೆ ಮಾಡಿ ತಪ್ಪಿತಸ್ಥ ಕಂಪನಿಯಿಂದ ರೈತರಿಗೆ ಪರಿಹಾರ ಕೊಡಿಸಬೇಕೆಂದು ದೂರಿನ ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಮೇಕೆದಾಟಿಗೆ ಆಗಮಿಸಿ ಪರಿಶೀಲನೆ: ಹೋರಾಟ ಮಾಡುವುದಾಗಿ ಶಪಥ ಮಾಡಿದ ಡಿಕೆಶಿ