ಹುಬ್ಬಳ್ಳಿ: ಧರ್ಮದ ಆಧಾರದ ಮೇಲೆ ಪೌರತ್ವ ನೀಡುವುದು ಸಂವಿಧಾನ ವಿರೋಧಿಯಾಗಿದೆ ಎಂದು ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಹೇಳಿದರು.
ಹುಬ್ಬಳ್ಳಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರತ್ವವನ್ನು ಧರ್ಮದ ಆಧಾರದ ಮೇಲೆ ನೀಡುತ್ತಿರುವುದು ಇದೇ ಮೊದಲು. ಪೌರತ್ವ ನೀಡುವುದು ಧರ್ಮದ ಆಧಾರದ ಮೇಲಾಗಬಾರದು ಎಂದು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಸಿಎಎ ಹಾಗೂ ಎನ್ಆರ್ಸಿ ವಿರುದ್ಧ ಕಿಡಿಕಾರಿದರು.
ಮುಸ್ಲಿಂ ಸಮಾಜವನ್ನು ಗುರಿಯಾಗಿಟ್ಟುಕೊಂಡು ಸಿಎಎ ಜಾರಿಗೊಳಿಸಲಾಗಿದೆ. ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶಗಳಿಂದ ವಲಸೆ ಬಂದವರನ್ನು ಮಾತ್ರ ಪರಿಗಣಿಸಲಾಗುತ್ತಿದೆ. ಮಯನ್ಮಾರ್, ಶ್ರೀಲಂಕಾ ಏಕೆ ಸೇರಿಸಿಲ್ಲ ಎಂದು ಪ್ರಶ್ನಿಸಿದರು. ದಾಖಲೆ ಇಲ್ಲದವರಿಗೆ ಎನ್ಆರ್ಸಿಯಿಂದಲೂ ತೊಂದರೆಯಾಗುತ್ತದೆ. ಇದು ಬಡವರ ವಿರೋಧಿಯಾಗಿದೆ ಎಂದು ಟೀಕಿಸಿದರು.
ಮುಸ್ಲಿಮರು ಮಾತ್ರ ಈ ಕಾಯ್ದೆಯನ್ನು ವಿರೋಧಿಸುತ್ತಿಲ್ಲ, ಸಂವಿಧಾನ ರಕ್ಷಿಸಬಯಸುವವರೆಲ್ಲರೂ ವಿರೋಧ ಮಾಡುತ್ತಿದ್ದಾರೆ. ನೋಟು ರದ್ದು ಮಾಡಿದಾಗ ಆದ ತೊಂದರೆ ಈಗಲೂ ಆಗಲಿದೆ. ಯಾವ ದೇಶದಿಂದ ಎಷ್ಟು ಜನರು ವಲಸೆ ಬಂದಿದ್ದಾರೆ ಎಂಬುದನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.