ಹುಬ್ಬಳ್ಳಿ: ರಾಜ್ಯದಲ್ಲಿ ಕೊರೊನಾ ನಿರ್ಬಂಧಗಳನ್ನು ಹೇರಿದ್ದರೂ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿರುವುದು ಸರಿಯಲ್ಲ. ಕಾಂಗ್ರೆಸ್ನ ಈ ನಡೆಯ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಠಕ್ಕೆ ಬಿದ್ದು ಪಾದಯಾತ್ರೆ ಮಾಡುತ್ತಿದೆ. ಕೊರೊನಾ ಸಮಯದಲ್ಲಿ ಇದು ಬೇಡವಾಗಿತ್ತು. ರಾಜಕೀಯ ಹಿನ್ನೆಲೆಯಲ್ಲಿ ಈ ಪಾದಯಾತ್ರೆ ಮಾಡಲಾಗುತ್ತಿದೆ ಎಂದು ಟೀಕಿಸಿದರು.
ಹಠಕ್ಕೆ ಬಿದ್ದು ಪಾದಯಾತ್ರೆ ಮಾಡುತ್ತಿರುವುದು ಏಕೆ ಎನ್ನುವುದು ಅರ್ಥ ಆಗ್ತಿಲ್ಲ. ಕಾಂಗ್ರೆಸ್ಗೆ ನಾಡಿನ ಹಿತಾಸಕ್ತಿ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ. ಪ್ರಚಾರ, ವೋಟ್ ಬ್ಯಾಂಕ್ಗಾಗಿ ಹೋರಾಟ ಮಾಡುತ್ತಿದ್ದಾರೆ. ಪಾದಯಾತ್ರೆ ಬಿಟ್ಟು ಮಾತುಕತೆಗೆ ಬನ್ನಿ. ರಚನಾತ್ಮಕ ಸಲಹೆ ನೀಡಿ. ಮೇಕೆದಾಟು ಯೋಜನೆ ಬಗ್ಗೆ ಚರ್ಚೆ ಮಾಡೋಣ ಎಂದರು.
ಪಾದಯಾತ್ರೆಯನ್ನು ತಡೆಯುವುದಕ್ಕೆ ನಾವು ಹೋಗುವುದಿಲ್ಲ. ಸುಮ್ಮನೆ ಗೊಂದಲ ಆಗಬಾರದು ಎಂದು ಬಿಟ್ಟಿದ್ದೇವೆ. ಸಾವಿರಾರು ಜನರನ್ನು ಕರೆದುಕೊಂಡು ಹೋಗಿ ಪಾದಯಾತ್ರೆ ಮಾಡಲಾಗುತ್ತಿದೆ. ಕೊರೊನಾ ತಡೆಯಲು ನಿರ್ಬಂಧ ಹೇರಿ ಜನಸಾಮಾನ್ಯರಿಗೆ ದಂಡ ಹಾಕುತ್ತೇವೆ. ರಾಜಕೀಯ ಮುಖಂಡರೇ ಹೀಗೆ ಮಾಡಿದ್ರೆ ಹೇಗೆ ಎಂದು ಪ್ರಶ್ನಿಸಿದರು.
ಅಧಿವೇಶನದಲ್ಲಿ ಮೇಕೆದಾಟು ಯೋಜನೆ ಬಗ್ಗೆ ಚರ್ಚೆಯನ್ನೇ ಮಾಡಿಲ್ಲ. ಈಗ ಬೀದಿ ಹೋರಾಟ ಮಾಡ್ತಿದ್ದಾರೆ. ಕೊರೊನಾ ಹೆಚ್ಚಾಗ್ತಿದೆ. ಇದೆಲ್ಲಾ ಈಗ ಬೇಡವಾಗಿತ್ತು ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ: ಡಿಕೆಶಿ, ಸಿದ್ದರಾಮಯ್ಯ ಸೇರಿ 31 ಮಂದಿ ವಿರುದ್ಧ ಎಫ್ಐಆರ್ ದಾಖಲು