ಧಾರವಾಡ(ಹುಬ್ಬಳ್ಳಿ): ಧಾರವಾಡ ವಲಯದ ಅರಣ್ಯ ಇಲಾಖೆಯಲ್ಲಿ ಅರಣ್ಯ ರಕ್ಷಕರಾಗಿ ಕೆಲಸ ಮಾಡುತ್ತಿರುವ 15 ಜನರಿಗೆ ನೀಡಲಾಗಿದ್ದ ಮುಂಬಡ್ತಿ ಆದೇಶವನ್ನು ವಾಪಸ್ ಪಡೆಯಲಾಗಿದೆ. ಜತೆಗೆ ಈ ಇಲಾಖೆಯಲ್ಲಿ ದೊಡ್ಡ ಗೋಲ್‌ಮಾಲ್ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ಮೇ 23 ರಂದು 15 ಜನ ಅರಣ್ಯ ರಕ್ಷಕರಿಗೆ ಮುಂಬಡ್ತಿ ನೀಡಿ ಸಿಸಿಎಫ್(ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ) ಅವರು ಆದೇಶ ಹೊರಡಿಸಿದ್ದರು. ಈ ವೇಳೆ ಸಿಸಿಎಫ್ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮೊಹ್ಮದ್ ಶರೀಫ್ ಬೂದಿಹಾಳ ಎಂಬಾತ 15 ಜನ ಅರಣ್ಯ ರಕ್ಷಕರಿಗೆ ಫೋನ್ ಮಾಡಿ ನೀವು 30 ಸಾವಿರ ಕೊಡಬೇಕು. ಇಲ್ಲವಾದಲ್ಲಿ ನಿಮಗೆ ಮುಂಬಡ್ತಿ ನೀಡಲಾಗುವುದಿಲ್ಲ. ಅದನ್ನು ವಾಪಸ್ ಪಡೆಯಲಾಗುವುದು ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗ್ತಿದೆ.
ಎಲ್ಲಿ ತಮಗೆ ಮುಂಬಡ್ತಿ ಸಿಗುವುದಿಲ್ವೋ ಎಂದು ತಿಳಿದ ಅರಣ್ಯ ರಕ್ಷಕರು ಆತನಿಗೆ ತಲಾ 30 ಸಾವಿರ ಹಣ ಕೊಟ್ಟಿದ್ದಾರಂತೆ. ಇದಾದ ಬಳಿಕ ಸಿಸಿಎಫ್ ಅವರು ಬಡ್ತಿ ಆದೇಶವನ್ನು ವಾಪಸ್ ಪಡೆದುಕೊಂಡಿದ್ದಾರೆ. ಇತ್ತ ಬಡ್ತಿಯೂ ಸಿಗದೆ ಹಣವನ್ನು ಕಳೆದುಕೊಂಡ ಅರಣ್ಯ ರಕ್ಷಕರು ಕಂಗಾಲಾಗಿದ್ದಾರೆ.
ಅರಣ್ಯ ರಕ್ಷಕರಿಗೆ ಮುಂಬಡ್ತಿ ನೀಡಲಾಗುವುದು ಎಂದು ಮೇ.23 ರಂದು ಆದೇಶ ಹೊರಡಿಸಲಾಗಿತ್ತು. ಎಲ್ಲರಿಂದಲೂ ಮೊಹ್ಮದ್ ಬೂದಿಹಾಳ ಹಣ ವಸೂಲಿ ಮಾಡಿದ್ದ. ನಂತರ ಜು.18 ರಂದು ತಮ್ಮ ಆದೇಶವನ್ನು ಸಿಸಿಎಫ್ ಅವರು ವಾಪಸ್ ಪಡೆದುಕೊಂಡಿದ್ದಾರೆ. ನಾವೇ ಸ್ವತಃ ಮೊಹ್ಮದ್ ಬೂದಿಹಾಳ ಅವರಿಗೆ 30 ಸಾವಿರ ಹಣ ಕೊಟ್ಟು ಬಂದಿದ್ದೇವೆ. ಮೊಹ್ಮದ್ ನಮಗೆ ಫೋನ್ ಮಾಡಿ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದ ಎಂದು ಅರಣ್ಯ ರಕ್ಷಕ ಚಮನ್ ಅಲಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಪುರಸಭೆ ಆವರಣದಲ್ಲಿ ಹುಟ್ಟುಹಬ್ಬ ಆಚರಿಸಿ ನಿಯಮ ಉಲ್ಲಂಘಿಸಿದ ಕಾಂಗ್ರೆಸ್ ಶಾಸಕ