ಹುಬ್ಬಳ್ಳಿ: ಆತ ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಾದ ಆರಕ್ಷಕ. ಆದರೆ, ಆತ ಮಾಡಿದ್ದೇ ಬೇರೆ. ಮನೆ ಮರಳಿ ಕೊಡ್ತಿಲ್ಲ ಅಂತಾ ಹೋದ ವ್ಯಕ್ತಿಗೆ, ಜೀವ ಬೆದರಿಕೆ ಹಾಕಿದ ಆರೋಪ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಕೇಳಿ ಬಂದಿದೆ. ಅಲ್ಲದೆ, ಆತ ಕರ್ತವ್ಯ ನಿರ್ವಹಿಸುವ ಪೊಲೀಸ್ ಠಾಣೆಯಲ್ಲಿಯೇ ಎಫ್‌ಐಆರ್ ದಾಖಲಾಗಿದ್ದು, ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವಂತಾಗಿದೆ.
ಹೀಗೆ ನಮ್ಮ ಮುಂದೆ ತಮಗೆ ಆಗಿದ ಅನ್ಯಾಯದ ಬಗ್ಗೆ ಹೇಳಿಕೊಳ್ಳುತ್ತಿರುವ ಇವರ ಹೆಸರು ಚಂದ್ರಶೇಖರ್ ಬಿರಾದಾರ. 56 ವರ್ಷದ ಇವರು ಹೊಟ್ಟೆಪಾಡಿಗಾಗಿ ಆಟೋ ಓಡಿಸಿಕೊಂಡು ಹುಬ್ಬಳ್ಳಿಯ ಆನಂದ ನಗರದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಚಂದ್ರಶೇಖರ್ ತನ್ನ ವೃತ್ತಿಯಿಂದ ಬಂದ ಆದಾಯ ಹಾಗೂ ಬ್ಯಾಂಕ್ನಲ್ಲಿ ಲೋನ್ ಮಾಡಿ ಆನಂದ ನಗರದಲ್ಲಿ ಮನೆ ಖರೀದಿಸಿ ವಾಸವಿದ್ದರು. 2008 ರಲ್ಲಿ ಆರ್ಥಿಕ ಸಂಕಷ್ಟದಿಂದಾಗಿ ಮೂರು ವರ್ಷಗಳ ಕಾಲ ಶ್ರೀಕಾಂತ್ ಕೊರಂಡವಾಡ ಎಂಬುವವರಿಗೆ ಲೀಸ್ ನೀಡಿದ್ದಾರೆ. ಲೀಸ್ ಅವಧಿ ಮುಗಿದ ಬಳಿಕ ಶ್ರೀಕಾಂತ್ ಕೊರಂಡವಾಡ ಮನೆ ಬಿಟ್ಟು ಕೊಡದೇ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಚಂದ್ರಶೇಖರ್ ವಿರುದ್ಧ ದೂರು ನೀಡಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಇದರ ವಿಚಾರಣೆ ನಡೆಸಿದ ಹುಬ್ಬಳ್ಳಿಯ ನ್ಯಾಯಾಲಯ ದಾವೆ ವಜಾಗೊಳಿಸಿ, ಚಂದ್ರಶೇಖರ್ಗೆ ಮನೆ ನೀಡುವಂತೆ ಆದೇಶ ಮಾಡಿದೆ. ಆದರೆ, ಅದ್ಯಾವುದಕ್ಕೂ ಕ್ಯಾರೇ ಎನ್ನದ ಶ್ರೀಕಾಂತ್, ಮನೆ ಖಾಲಿ ಮಾಡದೇ ನನಗೆ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ. ಈ ಕುರಿತು ದೂರು ದಾಖಲಿಸಲು ಹೋದರೆ, ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ದೂರು ದಾಖಲಸಿಕೊಳ್ಳದೇ ಜೀವ ಬೆದರಿಕೆ ಹಾಕಿದ್ದಾರೆ. ಠಾಣೆಯ ಲಕ್ಷ್ಮಣ ನಾಯಕ ಎಂಬ ಪೇದೆ ಕಿರುಕುಳ ನೀಡುತ್ತಿದ್ದಾರೆ ಎಂದು ಚಂದ್ರಶೇಖರ್ ಆರೋಪಿಸಿದ್ದಾರೆ.
ಚಂದ್ರಶೇಖರ್ ಸಾಲ ಮಾಡಿ ಮನೆ ಖರೀದಿ ಮಾಡಿದ್ದು, ಸಾಲವನ್ನು ಕಟ್ಟಲು ಆಗದೇ ನಿತ್ಯ ನ್ಯಾಯಾಲಯ, ಪೊಲೀಸ್ ಠಾಣೆ ಅಲೆದಾಡುತ್ತಲೇ ಇದ್ದಾರೆ. ಯಾವಾಗ ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದರಿಂದ ಚಂದ್ರಶೇಖರ್ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯಾಲಯದಲ್ಲಿ ದೂರು ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿದ್ದರಿಂದ ಇದೀಗ ಪೊಲೀಸ್ ಕಾನ್ಸ್ಟೇಬಲ್ ಮೇಲೆಯೇ A1 ಆರೋಪದಡಿ ಎಫ್‌ಐಆರ್ ದಾಖಲಾಗಿದೆ.
ಇದನ್ನೂ ಓದಿ: ಬ್ರಿಟನ್ನಿಂದ ಧಾರವಾಡಕ್ಕೆ ಬಂದವರಲ್ಲಿ ಓರ್ವ ನಾಪತ್ತೆ: ಡಿಸಿ ಮಾಹಿತಿ
ಇನ್ನು ಈ ಬಗ್ಗೆ ಪೊಲೀಸ್ ಪೇದೆಯನ್ನ ಕೇಳಿದ್ರೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿ, ನಂದೇನು ತಪ್ಪಿಲ್ಲ. ಠಾಣೆಗೆ ಅವರೇ ಬಂದು ದೂರು ನೀಡುತ್ತಿಲ್ಲ. ಅವರವರ ಜಗಳದಲ್ಲಿ ನಮ್ಮ ಮೇಲೆ ದೂರು ದಾಖಲಿಸಿದ್ದಾರೆ ಅಂತಾರೆ.
ಇನ್ನು ಮನೆಗೆ ನೀಡಿದ್ದ ಲೀಸ್ ಅವಧಿ ಮುಗಿದು ಒಂಬತ್ತು ವರ್ಷ ಕಳೆದಿದೆ. ಅಲ್ಲಿಂದ ಇಲ್ಲಿಯವರೆಗೆ ಕಾನೂನು ಹೋರಾಟ ಮಾಡಿಕೊಂಡು ಬಂದಿರೋ ಚಂದ್ರಶೇಖರ್ಗೆ ಮನೆ ಮಾತ್ರ ಸಿಗುತ್ತಿಲ್ಲ. ಹೀಗಾಗಿ ಜಿಲ್ಲಾಧಿಕಾರಿ, ಹುಬ್ಬಳ್ಳಿ - ಧಾರವಾಡ ನಗರ ಆಯುಕ್ತರಿಗೂ ಪತ್ರ ಬರೆದು ಮನವಿ ಮಾಡಿಕೊಂಡರೂ ನ್ಯಾಯ ಸಿಗುತ್ತಿಲ್ಲ. ನ್ಯಾಯ ಕೊಡಿಸಬೇಕಾದವರೇ ಹೀಗೆ ಮಾಡಿದ್ರೆ ಹೇಗೆ ಅನ್ನೋ ಪ್ರಶ್ನೆ ಚಂದ್ರಶೇಖರ್ ಅವರದ್ದು. ನ್ಯಾಯಾಲಯದ ಆದೇಶಕ್ಕೂ ಬೆಲೆ ಕೊಡದವರಿಂದ ನನಗೆ ನ್ಯಾಯ ಕೊಡಿಸುವವರು ಯಾರು ಅನ್ನೋ ಅಳಲಿಗೆ ಇನ್ನಾದರೂ ನ್ಯಾಯ ಸಿಗುತ್ತಾ ಕಾದು ನೋಡಬೇಕಿದೆ.