ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗದಲ್ಲಿ, ಸೇವಾ ನಿವೃತ್ತಿ ಹೊಂದಿದ ಸಾರಿಗೆ ಸಿಬ್ಬಂದಿಗೆ ಗೋಕುಲ ರಸ್ತೆಯಲ್ಲಿರುವ ಸಾರಿಗೆ ಸಂಸ್ಥೆಯ ಕಲಾ ಮತ್ತು ಸಾಂಸ್ಕೃತಿಕ ಭವನದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನಿವೃತ್ತರನ್ನು ಸನ್ಮಾನಿಸಿದ ನಂತರ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ ಮಾತನಾಡಿ, ಹಲವಾರು ವೈರುಧ್ಯಗಳ ನಡುವೆಯೂ 32ರಿಂದ 40 ವರ್ಷಗಳ ಸುದೀರ್ಘ ಕಾಲ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ಸಾರಿಗೆ ಸಿಬ್ಬಂದಿ ಕರ್ತವ್ಯ ನಿರ್ವಹಿಸುವಾಗ ಅನಿವಾರ್ಯವಾಗಿ ನಿತ್ಯವೂ ವಿವಿಧ ಸ್ತರದ ನೂರಾರು ಜನರೊಂದಿಗೆ ಬೆರೆಯಬೇಕಾಗುತ್ತದೆ. ಹಗಲು- ರಾತ್ರಿ, ಹಬ್ಬ-ಹರಿದಿನ ಎನ್ನದೆ ಕುಟುಂಬದಿಂದ ದೂರದಲ್ಲಿರಬೇಕಾಗುತ್ತದೆ. ಪ್ರತೀ ಕ್ಷಣವೂ ಬಸ್ಸಿನೊಂದಿಗೆ ಸಂಚರಿಸುತ್ತಾ ಒಂದೂರಿನಿಂದ ಮತ್ತೊಂದು ಊರಿಗೆ ಹೋಗಬೇಕು. ಆಯಾ ಪ್ರದೇಶಗಳ ಹವಾಮಾನ ವೈಪರೀತ್ಯಗಳನ್ನು ಸಹಿಸುತ್ತ ವಿಭಿನ್ನ ಆಹಾರ ಪದ್ಧತಿಗಳಿಗೆ ಒಗ್ಗಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಕೋವಿಡ್ -19 ಮಾರ್ಗಸೂಚಿ ನಿರ್ದೇಶನಗಳ ಹಿನ್ನೆಲೆಯಲ್ಲಿ ಮಂಗಳವಾರ ಹಾಗೂ ಬುಧವಾರ ಎರಡು ಹಂತಗಳಲ್ಲಿ ಕಾರ್ಯಕ್ರಮ ಆಯೋಜಿಸುವ ಮೂಲಕ ಸೇವಾ ನಿವೃತ್ತಿ ಹೊಂದಿದ 6 ಚಾಲಕರು, 8 ನಿರ್ವಾಹಕರು, 8 ತಾಂತ್ರಿಕ ಸಿಬ್ಬಂದಿ, ಒಬ್ಬರು ಆಡಳಿತ ಸಿಬ್ಬಂದಿ ಮತ್ತು 10 ಸಾರಿಗೆ ನಿಯಂತ್ರಕರು ಸೇರಿದಂತೆ 33 ಸಾರಿಗೆ ಸಿಬ್ಬಂದಿಯನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಬೀಳ್ಕೊಡಲಾಯಿತು.