ಹುಬ್ಬಳ್ಳಿ: ಇಲ್ಲಿನ ವಿಮಾನ ನಿಲ್ದಾಣ ಇಂದಿನಿಂದ ಕಾರ್ಯಾರಂಭ ಮಾಡಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರಾದೇಶಿಕ ವಿಮಾನಗಳ ಪ್ರಯಾಣಿಕರ ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ಕೌಂಟರ್ ಸ್ಥಾಪಿಸಿ, ಪ್ರಮಾಣಪತ್ರಗಳ ಪರಿಶೀಲನೆಗೆ ಕೈಗೊಳ್ಳಲಾಗಿರುವ ಕ್ರಮಗಳನ್ನು ಜಿಲ್ಲಾಧಿಕಾರಿ ದೀಪಾ ಚೋಳನ್ ಪರಿಶೀಲಿಸಿದರು.
ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ ಅವರು, ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೊರೊನಾ ನಿಯಂತ್ರಣಕ್ಕಾಗಿ ವಿಮಾನ ಪ್ರಯಾಣಿಕರ ಆಗಮನ, ನಿರ್ಗಮನಕ್ಕೆ ಅನುಸರಿಸಬೇಕಾದ ಕ್ರಮಗಳ ಕುರಿತು ನಿರ್ದೇಶನ ನೀಡಿದರು.
ಪ್ರಯಾಣಿಕರ ಆಗಮನ ಮತ್ತು ನಿರ್ಗಮನದ ಸಂದರ್ಭದಲ್ಲಿ ಅವರು 2 ದಿನಗಳ ಅವಧಿಯೊಳಗೆ ಪಡೆದಿರುವ ಪ್ರಯಾಣಿಕರ ವೈದ್ಯಕೀಯ ಪ್ರಮಾಣಪತ್ರಗಳನ್ನು ಪರಿಶೀಲಿಸಬೇಕು. ವೈದ್ಯಕೀಯ ತಪಾಸಣೆ ವೇಳೆ ಸಾಮಾಜಿಕ ಅಂತರದ ನಿಯಮ ಪಾಲಿಸಬೇಕು. ಜಿಲ್ಲೆಯ ಪ್ರಯಾಣಿಕರು ತಮಗೆ ನಿಗದಿಪಡಿಸಿದ ಕ್ವಾರಂಟೈನ್ ಕೇಂದ್ರಗಳಿಗೆ ತೆರಳಬೇಕು ಅಥವಾ ಸ್ವಂತ ವೆಚ್ಚದಲ್ಲಿ ಹೋಟೆಲ್ ಕ್ವಾರಂಟೈನ್ ಸೌಲಭ್ಯ ಆಯ್ದುಕೊಳ್ಳಬಹುದು. ಹೊರ ಜಿಲ್ಲೆಗಳ ಪ್ರಯಾಣಿಕರಿಗೆ ತಮ್ಮ ಸ್ಥಳಗಳಿಗೆ ತೆರಳಲು ಪರಿಶೀಲನೆ ನಂತರ ಅವಕಾಶ ಕಲ್ಪಿಸಲಾಗುವುದು. ವಾಕರಸಾಸಂ ಮತ್ತು ಹೆಚ್ಡಿಬಿಆರ್ಟಿಎಸ್ ಮೂಲಕ ಬಸ್ಗಳ ಸೌಕರ್ಯ ಏರ್ಪಡಿಸಲಾಗಿದೆ ಎಂದರು.