ಹುಬ್ಬಳ್ಳಿ: ಸರ್ಕಾರಿ ಕಚೇರಿಗಳಲ್ಲಿ ಹೋಮ ಹವನ ಮಾಡಲು ಅವಕಾಶವಿಲ್ಲ. ಆದ್ರೆ ಇಲ್ಲೊಂದು ಗ್ರಾಮ ಪಂಚಾಯಿತಿಯಲ್ಲಿ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಕಾನೂನು ಗಾಳಿಗೆ ತೂರಿ ಗ್ರಾಮ ಪಂಚಾಯಿತಿಯಲ್ಲಿ ಹೋಮ ಹವನ ಮಾಡಿರುವುದು ಬೆಳಕಿಗೆ ಬಂದಿದೆ.
ಹೌದು, ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮಪಂಚಾಯಿತಿಯ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಲಿಂಗಾರೆಡ್ಡಿ ನಡುವಿನಮನಿ ಹಾಗೂ ಉಪಾಧ್ಯಕ್ಷ ಶ್ರೀಕಾಂತ್ ಪಾಟೀಲ್ ಹಾಗೂ ಸದಸ್ಯರು ಪಂಚಾಯಿತಿಯಲ್ಲಿಯೇ ಹೋಮ ಹವನ ನಡೆಸಿದ್ದಾರೆ. ಗ್ರಾಮ ಪಂಚಾಯಿತಿ ಪಿಡಿಒ ಅವರ ಸಮ್ಮುಖದಲ್ಲಿಯೇ ಪಂಚಾಯಿತಿಯಲ್ಲಿ ಹೋಮ ಹವನ, ಪೂಜೆ ನಡೆಸಿದ್ದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.
ಸರ್ಕಾರಿ ಕಾರ್ಯಾಲಯಗಳಲ್ಲಿ ಈ ರೀತಿ ಹೋಮ ಹವನಕ್ಕೆ ಅವಕಾಶವಿಲ್ಲ. ಆದ್ರೆ ಇಲ್ಲಿ ಎಲ್ಲ ಕಾನೂನುಗಳನ್ನು ಗಾಳಿಗೆ ತೂರಿ ಪೂಜೆ ಮಾಡಿದ್ದು ಸರಿಯಲ್ಲ. ಸರ್ಕಾರಿ ಕಚೇರಿಯನ್ನು ಸಾರ್ವಜನಿಕ ಸೇವೆಗಾಗಿ ಬಳಸಿಕೊಳ್ಳಬೇಕು. ಅದನ್ನು ಬಿಟ್ಟು ಹೋಮ - ಹವನ ಮಾಡಿದ್ದು ಎಷ್ಟು ಸರಿ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣೆಯಲ್ಲಿ ಗೆಲ್ಲಿಸಿದ್ದು ಗ್ರಾಮದ ಅಭಿವೃದ್ಧಿ ಮಾಡಲಿಕ್ಕೆ, ಪಂಚಾಯಿತಿಯಲ್ಲಿ ಹೋಮ ಮಾಡಲಿಕ್ಕಲ್ಲ, ಪೂಜೆ ಬಿಡಿ, ಗ್ರಾಮದ ಜನರ ಕಷ್ಟಕ್ಕೆ ಸ್ಪಂದಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.