ಹುಬ್ಬಳ್ಳಿ(ಧಾರವಾಡ) : ರಷ್ಯಾ-ಉಕ್ರೇನ್ ಮಧ್ಯೆ ಯುದ್ಧ ನಡೆಯುತ್ತಿದೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ವಿದ್ಯಾರ್ಥಿನಿ ಚೈತ್ರಾ ಉಕ್ರೇನ್ನಲ್ಲಿ ಸಿಲುಕಿದ್ದು, ಪೋಷಕರು ಆತಂಕಗೊಂಡಿದ್ದಾರೆ.
ಮಂಟೂರಿನಲ್ಲಿ ಶಾಲೆಯೊಂದನ್ನು ನಡೆಸುತ್ತಿರುವ ಸುನಂದಾ ಅವರು ತನ್ನ ಮಗಳನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಕಳುಸಿದ್ದಾರೆ. ಆದ್ರೀಗ ಅಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದ್ದು, ಪೋಷಕರು ಆತಂಕಕ್ಕೆ ಸಿಲುಕಿದ್ದಾರೆ.
ಇದನ್ನೂ ಓದಿ: ಉಕ್ರೇನ್ನಲ್ಲಿ ಸಿಲುಕಿಕೊಂಡ ಹುಬ್ಬಳ್ಳಿ ಮೂಲದ MBBS ವಿದ್ಯಾರ್ಥಿನಿ.. ಪೋಷಕರಿಗೆ ಆತಂಕ
ಚೈತ್ರಾ ಸಂಶಿ ನಿನ್ನೆ ಬೆಳಗಿನ ಜಾವ 5 ಗಂಟೆ ಸುಮಾರಿಗೆ ತಾಯಿಗೆ ಕರೆ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಹಾಸ್ಟೆಲ್ ದೂರದಲ್ಲಿ ಬಾಂಬ್ ಸ್ಫೋಟಗೊಂಡಿದೆ ಎಂದು ತಾಯಿ ಬಳಿ ಹೇಳಿಕೊಂಡಿದ್ದಾರೆ. ಮಗಳು ಆತಂಕದಲ್ಲಿರುವ ಸುದ್ದಿ ಕೇಳಿ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.
ಮೂರು ವರ್ಷದ ಹಿಂದೆ ವೈದ್ಯಕೀಯ ಶಿಕ್ಷಣ ವ್ಯಾಸಂಗಕ್ಕೆ ತೆರಳಿರುವ ಚೈತ್ರಾ ಅವರ ಆಗಮನಕ್ಕೆ ಕುಟುಂಬ ಮಾತ್ರವಲ್ಲದೇ ಜಿಲ್ಲೆಯೇ ಎದುರು ನೋಡುತ್ತಿದೆ. ಮಗಳ ಯೋಗಕ್ಷೇಮ ವಿಚಾರಿಸುವ ಮೂಲಕ ಮಗಳಿಗೆ ತಾಯಿ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.
ಚೈತ್ರಾ ಮನೆಗೆ ಎಸ್ಪಿ ಭೇಟಿ : ಚೈತ್ರಾ ಸಂಶಿಯವರ ಮನೆಗೆ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ್ ಭೇಟಿ ನೀಡಿ ಚೈತ್ರಾ ಪೋಷಕರಿಗೆ ಧೈರ್ಯ ತುಂಬಿದರು. ಚೈತ್ರಾ ಅವರನ್ನು ವಿದೇಶಾಂಗ ಸಚಿವಾಲಯದ ಸಹಯೋಗದೊಂದಿಗೆ ಕರೆತರುವುದಾಗಿ ಭರವಸೆ ನೀಡಿದರು.