ಹುಬ್ಬಳ್ಳಿ : ನೈಋತ್ಯ ರೈಲ್ವೆಯು ರೈಲು ಸಂಖ್ಯೆ 073377/07338 ಎಸ್ಎಸ್ಎಸ್ ಹುಬ್ಬಳ್ಳಿ–ಗುಂತಕಲ್- ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ಪ್ಯಾಸೆಂಜರ್ ರೈಲು ಸೇವೆ ಆರಂಭವಾಗಿದೆ. ಹುಬ್ಬಳ್ಳಿ - ಗುಂತಕಲ್ ವಿಶೇಷ ಡೆಮು ಪ್ಯಾಸೆಂಜರ್‌ನ ಪ್ರಥಮ ರೈಲು ಹುಬ್ಬಳ್ಳಿಯಿಂದ ಹೊರಟಿತು.
ಡೆಮು ಎನ್ನುವುದು ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್‌ನ ಸಂಕ್ಷಿಪ್ತ ರೂಪ. ಇದು ಆನ್ ಬೋರ್ಡ್ ಡೀಸೆಲ್ ಎಂಜಿನ್ನುಗಳಿಂದ ಸಂಚರಿಸಲ್ಪಡುವ ಬಹು ಘಟಕಗಳ ರೈಲು. ಈ ರೈಲಿನ ಒಂದು ಬಂಡಿಯಲ್ಲೇ ಎಂಜಿನ್ ಅನ್ನು ಅಳವಡಿಸಿರುವುದರಿಂದ ಡೆಮು ರೈಲಿಗೆ ಪ್ರತ್ಯೇಕವಾದ ಎಂಜಿನ್/ಲೋಕೋಮೋಟಿವ್‌ನ ಅಗತ್ಯವಿರುವುದಿಲ್ಲ.
ಈ ಬಹು ಘಟಕದ ರೈಲಿನ ಪ್ರಯಾಣಿಕರನ್ನು ಒಯ್ಯುವ ಪ್ರತಿಯೊಂದು ಕಾರ್‌ನಲ್ಲೂ (ಘಟಕದಲ್ಲೂ )ಬೋಗಿಯ ತಳಭಾಗದಲ್ಲಿ ಪ್ರೇರಕ ಶಕ್ತಿಯ ಮೂಲವನ್ನು ಅಳವಡಿಸಲಾಗಿರುತ್ತದೆ. ಇದು ಡೆಮು ರೇಕುಗಳ ವೇಗವನ್ನು ತ್ವರಿತವಾಗಿ ವರ್ಧಿಸಲು ಹಾಗೂ ಕಡಿಮೆ ಮಾಡಲು ಅನುವು ಮಾಡಿಕೊಡುತ್ತದೆ. ಹೀಗಾಗಿ, ಕಡಿಮೆ ದೂರದ ಪ್ಯಾಸೆಂಜರ್/ನಿತ್ಯ ಸೇವೆಯ ರೈಲುಗಳ ಸಂಚಾರಕ್ಕೆ ಇದು ಹೆಚ್ಚು ಸೂಕ್ತವಾಗಿವೆ.
ಹುಬ್ಬಳ್ಳಿಯಿಂದ ಆರಂಭವಾದ ಪ್ರಥಮ ಡೆಮು ರೈಲು ಸೇವೆ
ಡೆಮು ರೈಲಿಗೆ ಅಂತಿಮ ನಿಲ್ದಾಣದಲ್ಲಿ ಎಂಜಿನ್ ಅನ್ನು ಹಿಂದು ಮುಂದಾಗಿಸುವ ಅಗತ್ಯವಿರುವುದಿಲ್ಲ. ಇದರಿಂದ ಶಂಟಿಂಗ್ ಕಾರ್ಯಾಚರಣೆಯ ಅಗತ್ಯವಿರದ ಕಾರಣ ರೈಲು ಸಂಚಾರದ ಎರಡೂ ಕೊನೆಗಳಲ್ಲಿ ಶಂಟಿಂಗ್ ಕಾರ್ಯಕ್ಕಾಗಿ ತಗುಲುವ ಸಮಯವನ್ನು ಸಂಪೂರ್ಣವಾಗಿ ಕಡಿತಗೊಳಿಸುತ್ತದೆ. ವಾಸ್ಕೋಡಗಾಮ ಮತ್ತು ಕುಲೆಂ ನಿಲ್ದಾಣಗಳ ನಡುವೆ ಪ್ರಾರಂಭವಾದ ಡೆಮು ಸೇವೆಯ ಬಳಿಕ ಇದು ಹುಬ್ಬಳ್ಳಿ ವಿಭಾಗದ ಎರಡನೇ ಡೆಮು ರೈಲು ಆಗಿದ್ದು, ಹುಬ್ಬಳ್ಳಿ ನಿಲ್ದಾಣದಿಂದ ಪ್ರಾರಂಭವಾದ ಪ್ರಥಮ ರೈಲು ಸೇವೆಯಾಗಿದೆ.
ಬಳ್ಳಾರಿಯಿಂದ ಲೋಂಡಾವರೆಗಿನ ವಿದ್ಯುದೀಕರಣ ಕಾರ್ಯವು ಶೀಘ್ರವಾಗಿ ಮುಂದುವರೆಯುತ್ತಿದೆ. ಅದು ಪೂರ್ಣವಾದ ಬಳಿಕ ಆ ಭಾಗದಲ್ಲೂ ಡೆಮು ಸೇವೆಯನ್ನು ಪ್ರಾರಂಭಿಸಬಹುದಾಗಿದೆ. ರೈಲು ಸಂಖ್ಯೆ 073377 ಎಸ್ಎಸ್ಎಸ್ ಹುಬ್ಬಳ್ಳಿ–ಗುಂತಕಲ್ ನಿತ್ಯ ಸೇವೆಯ ವಿಶೇಷ ಪ್ಯಾಸೆಂಜರ್ ರೈಲು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಬೆಳಗ್ಗೆ 7.30 ಗಂಟೆಗೆ ನಿರ್ಗಮಿಸಿ ಮಧ್ಯಾಹ್ನ 2.30ಗಂಟೆಗೆ ಗುಂತಕಲ್ ನಿಲ್ದಾಣವನ್ನು ತಲುಪುವುದು.
ರೈಲು ಸಂಖ್ಯೆ 073378 ಗುಂತಕಲ್-ಎಸ್ಎಸ್ಎಸ್ ಹುಬ್ಬಳ್ಳಿ ನಿತ್ಯ ಸೇವೆಯ ವಿಶೇಷ ಪ್ಯಾಸೆಂಜರ್ ರೈಲು ಗುಂತಕಲ್ ನಿಲ್ದಾಣದಿಂದ ಮಧ್ಯಾಹ್ನ 2.40ಗಂಟೆಗೆ ನಿರ್ಗಮಿಸಿ ರಾತ್ರಿ 9.30ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣವನ್ನು ತಲುಪುವುದು ಎಂದು ನೈರುತ್ಯ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಇ. ವಿಜಯ ತಿಳಿಸಿದ್ದಾರೆ.
ಇದನ್ನೂ ಓದಿ: ಅಂಕೋಲಾ-ಹುಬ್ಬಳ್ಳಿ ರೈಲ್ವೆ ಯೋಜನೆ.. ಹೈಕೋರ್ಟ್ ಆದೇಶದಿಂದ ಹೋರಾಟ ಸಮಿತಿಗೆ ಸಂತಸ