ಹುಬ್ಬಳ್ಳಿ: ಮಾ. 31ರಂದು ಪ್ರಜಾಪ್ರಭುತ್ವ ಬಿಕ್ಕಟ್ಟು ಸಂಕಲ್ಪ ಸಭೆಯನ್ನು ಧಾರವಾಡದಲ್ಲಿ ಆಯೋಜಿಸಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ದೇಶದ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಅತಿ ಗಂಡಾಂತರದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಅದಕ್ಕೆ ಕೇಂದ್ರ ಸರ್ಕಾರ ಹಾಗೂ ಅದಕ್ಕೆ ಬೆಂಬಲವಾಗಿರುವ ಎನ್ಡಿಎ ಮತ್ತು ಬಿಜೆಪಿ ತತ್ವ ಆದರ್ಶಗಳು ಪ್ರಜಾಪ್ರಭುತ್ವದ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿರುವುದು ಕಾರಣ. ಈ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವದ ಬಿಕ್ಕಟ್ಟು ಸಂಕಲ್ಪ ಸಭೆ ಆಯೋಜಿಸಲಾಗಿದೆ ಎಂದರು.
ದೇಶದ ಪ್ರಜಾಪ್ರಭುತ್ವ ಬಿಕ್ಕಟ್ಟು ನಿಯಂತ್ರಿಸುವ ಸದುದ್ದೇಶದಿಂದ ಸಿಟಿಜನ್ ಫಾರ್ ಡೆಮಾಕ್ರಸಿ ಸಂಘಟನೆಯ ವತಿಯಿಂದ ಗಂಭೀರ ಮಂಥನವೊಳಗೊಂಡ ಸಂಕಲ್ಪ ಸಭೆ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಉಚ್ಚ ನ್ಯಾಯಾಲಯದ ನಿವೃತ್ತ ಜಸ್ಟಿಸ್ ಎ.ಪಿ.ಶಾಹ, ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿಗಳಾದ ಪ್ರಶಾಂತ ಭೂಷಣ್, ಚಿಂತಕರಾದ ಯೋಗೇಂದ್ರ ಯಾದವ್, ಎಡಿಆರ್ ಮುಖ್ಯಸ್ಥ ಜಗದೀಶ ಛೋಕರ್, ಸಾಹಿತಿಗಳಾದ ದೇವನೂರು ಮಹಾದೇವ ಸೇರಿದಂತೆ ಸಾಹಿತಿಗಳು, ಸಾಮಾಜಿಕ ಚಿಂತಕರು ಪಾಲ್ಗೊಂಡು ಸಮಾಲೋಚನೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.