ಹುಬ್ಬಳ್ಳಿ : ಭೂ ಪರಭಾರೆ ನಿಷೇಧ ಕಾಯ್ದೆ(ಪಿಟಿಸಿಎಲ್)ಯ ಸಮಗ್ರ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಆಗ್ರಹಿಸಿ ಡಿ.17ರಂದು ಬೆಳಗಾವಿಯ ಸುವರ್ಣ ಸೌಧ ಚಲೋ ಜತೆಗೆ ಅಂದು ರಾಜ್ಯಮಟ್ಟದ ಧರಣಿ ಸತ್ಯಾಗ್ರಹ ನಡೆಸಲಿದ್ದೇವೆ ಎಂದು ಸಮತಾ ಸೈನಿಕ ದಳದ ಸಂಚಾಲಕ ಶಂಕರ ಅಜಮನಿ ಹೇಳಿದರು.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸಿ, ಎಸ್ಟಿ ಭೂ ಪರಭಾರೆ ನಿಷೇಧ ಕಾಯ್ದೆ ಸಮಗ್ರ ತಿದ್ದುಪಡಿ ಮಸೂದೆಯನ್ನು ವಿಧಾನ ಮಂಡಲದಲ್ಲಿ ಅಂಗೀಕಾರ ಮಾಡಬೇಕೆಂದು 2017ರಿಂದ ದಲಿತ ಸಂಘಟನೆಗಳ ಒಕ್ಕೂಟ ಹಂತ ಹಂತವಾಗಿ ಹೋರಾಟಗಳನ್ನು ಮಾಡುತ್ತಾ ಬಂದಿದೆ.
ಸದ್ಯ ಒಕ್ಕೂಟವೇ ಸಿದ್ದಪಡಿಸಿದ ಮಸೂದೆಯ ಕರಡನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ತಾತ್ವಿಕ ಒಪ್ಪಿಗೆ ನೀಡಿ ಸಂಬಂಧಿಸಿದ ಇಲಾಖೆಗಳ ವರಿಷ್ಠಾಧಿಕಾರಿಗಳೊಂದಿಗೆ ಸಭೆಯನ್ನು ನಡೆಸಲಾಗಿದೆ ಎಂದಿದ್ದಾರೆ.
ಆದ್ದರಿಂದ ಸಚಿವ ಸಂಪುಟವು ಈ ಕರಡನ್ನು ಅನುಮೋದಿಸಬೇಕು ಹಾಗೂ ಸುವರ್ಣಸೌಧ ವಿಧಾನ ಮಂಡಲದಲ್ಲಿ ಮಸೂದೆಯನ್ನು ಅಂಗೀಕರಿಸಬೇಕೆಂದು ಆಗ್ರಹಿಸಿ, ಬೆಳಗಾವಿ ಚಲೋ ಕಾರ್ಯಕ್ರಮಕ್ಕೆ ಕರೆ ನೀಡುತ್ತಿದ್ದೇವೆ. ಬಾಧಿತ ಎಸ್ಸಿ, ಎಸ್ಟಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶಂಕರ ಅಜಮನಿ ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಎಸ್.ಬಿ.ಹುಬ್ಬಳ್ಳಿಕರ್, ರೇಣುಕಾ ಕಾವರಿದಾಲ, ಮಂಜುನಾಥ ಗುಡಿಮನಿ ಸೇರಿದಂತೆ ಉಪಸ್ಥಿತರಿದ್ದರು.