ಹುಬ್ಬಳ್ಳಿ (ಧಾರವಾಡ) : ಅವಳಿ ನಗರದಲ್ಲಿ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಮೂರು ವರ್ಷಗಳಲ್ಲಿ ಸಾಮಾಜಿಕ ಜಾಲತಾಣ, ಒಟಿಪಿ ಹಾಗೂ ಆನ್‌ಲೈನ್ ಮೂಲಕ ವಂಚಿಸಿದ 440ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. 2022ರ ಮಾರ್ಚ್ ಅವಧಿಯವರೆಗೆ 10 ಕೋಟಿ ರೂ.ಗೂ ಹೆಚ್ಚು ವಂಚನೆ ನಡೆದಿದೆ ಎಂದು ಅಂದಾಜಿಸಲಾಗಿದೆ. ಈವರೆಗ ಒಟ್ಟು 40 ಪ್ರಕರಣಗಳಲ್ಲಿ ಆರೋಪಿಗಳು ಪತ್ತೆಯಾಗಿದ್ದಾರೆ. ಒಬ್ಬರಿಗೆ ಮಾತ್ರ ಶಿಕ್ಷೆಯಾಗಿದೆ. 78.11 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ.
ಮಾರ್ಚ್ ತಿಂಗಳಿನಲ್ಲಿ ಉದ್ಯಮಿಯೊಬ್ಬರಿಗೆ 3.5 ಕೋಟಿ ರೂ. ವಂಚನೆ ಮಾಡಿದ್ದು, ಸೈಬರ್ ಪ್ರಕರಣಗಳಿಗೆ ಮಿತಿಯೇ ಇಲ್ಲವಾಗಿದೆ. ಆದರೆ, ಪೊಲೀಸ್ ಆಯುಕ್ತರು ಮಾತ್ರ ಇಂತಹ ಅಪರಾಧಗಳಿಗೆ ಕಡಿವಾಣ ಹಾಕುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇನ್ನೂ ಗೃಹ ಬಳಕೆ ವಸ್ತುಗಳ ಖರೀದಿ, ವಾಹನಗಳ ಮಾರಾಟ, ಬಾಡಿಗೆ ಮನೆ ಹುಡುಕಾಟ ಮುಂತಾದ ಮಾಹಿತಿ ಪಡೆಯಲು ಕೆಲವರು ಗೂಗಲ್ ಮೊರೆ ಹೋಗುತ್ತಿದ್ದಾರೆ. ಆಗ ಸಾಕಷ್ಟು ಜನರು ಆನ್‌ಲೈನ್ ವಂಚಕರ ಬಲೆಗೆ ಬಿದ್ದಿದ್ದಾರೆ.
ಬ್ಯಾಂಕ್‌ಗೆ ಸಂಬಂಧಿಸಿದ ಮಾಹಿತಿ ಹಂಚಿಕೊಳ್ಳಬೇಡಿ ಎಂದು ಎಷ್ಟು ಬಾರಿ ಜಾಗೃತಿ ಮೂಡಿಸಿದರೂ ಸಹ ಯಾರೂ ಕೂಡ ಕ್ಯಾರೆ ಎನ್ನದೇ ವಂಚನೆ ಜಾಲದಲ್ಲಿ ಬೀಳುತ್ತಿದ್ದಾರೆ. ಎಟಿಎಂ ಕಾರ್ಡ್‌ಗೆ ಕೆವೈಸಿ ಲಿಂಕ್ ಮಾಡಬೇಕು ಹಾಗೂ ಗ್ರಾಹಕರ ಸೇವಾ ಕೇಂದ್ರದಿಂದ ಎಂದು ಕರೆ ಮಾಡುವ ವಂಚಕರು ಬ್ಯಾಂಕ್‌ಗೆ ಸಂಬಂಧಿಸಿದ ಮಾಹಿತಿ ಪಡೆದು ವಂಚಿಸುತ್ತಿದ್ದಾರೆ. ಕಡಿಮೆ ಬೆಲೆಯಲ್ಲಿ ಕಾರು, ದ್ವಿಚಕ್ರ ವಾಹನ, ಮೊಬೈಲ್ ಸೇರಿದಂತೆ ವಿವಿಧ ವಸ್ತುಗಳು ಮಾರಾಟಕ್ಕಿವೆ ಎಂಬುದನ್ನು ನಂಬಿಸಿ ಅವರಿಂದ ಒಟಿಪಿ ಪಡೆದು ಅವರ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡು ವಂಚಿಸಲಾಗುತ್ತಿದೆ.
ಇದನ್ನೂ ಓದಿ: ಬಾಕ್ಸಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಹುಬ್ಬಳ್ಳಿ ವಿದ್ಯಾರ್ಥಿನಿಯರು
ಈ ಬಗ್ಗೆ ತಿಂಗಳಿಗೊಮ್ಮೆ ಮೈಕ್ ಘೋಷಣೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಜನರು ಮಾತ್ರ ಅಪರಿಚಿತ ವ್ಯಕ್ತಿಗಳ ಬಣ್ಣದ ಮಾತಿಗೆ ಮರುಳಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಅಪರಾಧಗಳಿಗೆ ಕಡಿವಾಣ ಹಾಕುತ್ತೇವೆ ಎಂದು ಪೊಲೀಸ್ ಇಲಾಖೆ ಭರವಸೆ ನಿಡಿದೆ.