ಹುಬ್ಬಳ್ಳಿ: ಧಾರವಾಡದ ಎಸ್ಡಿಎಂ ಮೆಡಿಕಲ್ ಕಾಲೇಜಿನಲ್ಲಿ ಕೊರೊನಾ ಸ್ಫೋಟದ ಬೆನ್ನಲ್ಲೇ ವಾಣಿಜ್ಯನಗರಿ ಹುಬ್ಬಳ್ಳಿ ಕಿಮ್ಸ್ ಅಲರ್ಟ್ ಆಗಿದ್ದು, ಎರಡೂ ಡೋಸ್ ಕೊರೊನಾ ಲಸಿಕೆ ಪಡೆದವರಿಗಷ್ಟೇ ಕಿಮ್ಸ್ ಪ್ರವೇಶಕ್ಕೆ ಅನುಮತಿ ನೀಡಲು ನಿರ್ಧರಿಸಲಾಗಿದೆ.
ಎಸ್ಡಿಎಂ ಮೆಡಿಕಲ್ ಕಾಲೇಜಿನ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಬಂದಿರುವ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಎರಡೂ ಡೋಸ್ ಪಡೆದ ರೋಗಿಗಳು ಮತ್ತು ಸಂಬಂಧಿಕರಿಗೆ ಮಾತ್ರ ಪ್ರವೇಶ ಕಲ್ಪಿಸಿ ಕಿಮ್ಸ್ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.
ಕಿಮ್ಸ್ ಆಸ್ಪತ್ರೆಗೆ ಬರುವವರು ಲಸಿಕೆ ಪಡೆದಿದ್ದಾರೋ? ಇಲ್ಲವೋ? ಎಂದು ಪರಿಶೀಲಿಸಲು ಐದು ತಂಡಗಳನ್ನು ನಿಯೋಜಿಸಲಾಗಿದ್ದು, ಆಸ್ಪತ್ರೆಗೆ ಬರುವವರು ಕಡ್ಡಾಯವಾಗಿ ಲಸಿಕೆ ಪಡೆದ ದಾಖಲೆ ತರಬೇಕು. ಇಲ್ಲದಿದ್ದರೇ ತುರ್ತು ಚಿಕಿತ್ಸೆ ಹೊರತುಪಡಿಸಿ, ಆಸ್ಪತ್ರೆಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ಆದೇಶ ಹೊರಡಿಸಲಾಗಿದೆ.
ಹೊರ ರೋಗಿಗಳ ವಿಭಾಗ, ತುರ್ತು ಚಿಕಿತ್ಸಾ ವಿಭಾಗ, ಮಕ್ಕಳ ವಾರ್ಡ್, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಳಿಯಲ್ಲಿ ಐದು ತಂಡಗಳು ಪರೀಶಿಲನೆ ನಡೆಸಲಿವೆ. ರೋಗಿಗಳ ಸಂಬಂಧಿಗಳು ವ್ಯಾಕ್ಸಿನ್ ಪಡೆಯದಿದ್ದರೆ ಅವರಿಗೂ ಕೂಡ ಆಸ್ಪತ್ರೆಯಲ್ಲಿಯೇ ತ್ವರಿತವಾಗಿ ವ್ಯಾಕ್ಸಿನ್ ನೀಡುವ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಹಾಗೂ ರೋಗಿಗಳು ಗೊಂದಲಕ್ಕೆ ಒಳಗಾಗದೇ ಎಲ್ಲರೂ ಕಡ್ಡಾಯವಾಗಿ ವ್ಯಾಕ್ಸಿನ್ ಪಡೆಯುವ ಉದ್ದೇಶದಿಂದ ಜಾರಿಗೆ ತರಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಿಂದ ಹೊರಟಿದ್ದ ವಿಮಾನ ನಾಗ್ಪುರದಲ್ಲಿ ತುರ್ತು ಲ್ಯಾಂಡಿಂಗ್