ಹುಬ್ಬಳ್ಳಿ: ಲಾಕ್ಡೌನ್ ಅವಧಿಯಲ್ಲಿ ದೇಶಾದ್ಯಂತ ಅನೇಕ ವ್ಯಾಪಾರ, ವಹಿವಾಟುಗಳು ನಷ್ಟಕ್ಕೆ ಸಿಲುಕಿದ್ದು, ಅದರಂತೆ ಮನೋರಂಜನೆ ತಾಣವಾದ ಚಿತ್ರಮಂದಿರಕ್ಕೂ ಕೊರೊನಾ ಬಹುದೊಡ್ಡ ಹೊಡೆತ ಕೊಟ್ಟಿದೆ. ಪರಿಣಾಮ ಚಿತ್ರಮಂದಿರ ನಂಬಿ ಜೀವನ ನಡೆಸುತ್ತಿದ್ದ ಮಾಲೀಕರು ಹಾಗೂ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಸರ್ಕಾರ ಚಿತ್ರಮಂದಿರ ತೆರೆಯಲು ಅನುಮತಿ ನೀಡಿದ್ರೂ ಸಹಾ ಮಾಲೀಕರಲ್ಲಿ ಆತಂಕ ಇನ್ನೂ ಮನೆ ಮಾಡಿದೆ.
ಭಾರತಕ್ಕೆ ಎಂಟ್ರಿ ಕೊಟ್ಟ ಮಹಾಮಾರಿ ಕೊರೊನಾ ವೈರಸ್ ಹೊಡೆತಕ್ಕೆ ಚಿತ್ರಮಂದಿರಗಳ ಮಾಲೀಕರು ಕಂಗಾಲಾಗಿ ಹೋಗಿದ್ದಾರೆ. ಕಳೆದ ಮಾರ್ಚ್ 10 ರಿಂದ ಚಿತ್ರಮಂದಿರಗಳು ಸಂಪೂರ್ಣ ಬಂದ್ ಆಗಿದ್ದು, ಇದೀಗ ಚಿತ್ರಮಂದಿರಗಳನ್ನು ತೆರೆಯಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಆದ್ರೆ, ಬರೋಬ್ಬರಿ 6 ತಿಂಗಳ ಬಂದ್ನಿಂದ ಲಕ್ಷಾಂತರ ರೂ. ನಷ್ಟ ಹೊಂದಿರುವ ಚಿತ್ರಮಂದಿರ ಮಾಲೀಕರಿಗೆ ಆತಂಕ ದೂರವಾಗಿಲ್ಲ.
ಚಿತ್ರಮಂದಿರ ತೆರೆದರೂ ಜನರು ಬರುವ ವಿಶ್ವಾಸ ಮಾಲೀಕರಿಗೆ ಇಲ್ಲ. ಅದರ ಜೊತೆಗೆ ಅರ್ಧ ಸೀಟುಗಳನ್ನು ಖಾಲಿ ಬಿಡಬೇಕಿದೆ. ಇದರಿಂದ ಚಿತ್ರ ನಿರ್ಮಾಪಕರಿಗೆ ಹಾಗೂ ಮಾಲೀಕರಿಗೆ ದೊಡ್ಡ ಹೊಡೆತ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಚಿತ್ರಮಂದಿರ ಮಾಲೀಕರು.
ಇನ್ನು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಚಿತ್ರಮಂದಿರ ಕಾರ್ಯ ನಿರ್ವಹಿಸಲು ಸರ್ಕಾರ ಅನುಮತಿ ನೀಡಿದೆ. ಆದ್ರೆ, ಜನರು ಚಿತ್ರಮಂದಿರಗಳತ್ತ ಬರುವುದು ಅನುಮಾನವಾಗಿದೆ. ಜನರ ಮನಸ್ಸಿನಲ್ಲಿ ಕೊರೊನಾ ಭಯ ಇನ್ನೂ ಹಾಗೇ ಇದೆ.
ಇದರಿಂದ ಕನ್ನಡ ಚಿತ್ರರಂಗ ಹಾಗೂ ಪೋಸ್ಟರ್ ಮ್ಯಾನ್, ನಟ-ನಟಿಯರು, ಸಿನಿಮಾ ಹಂಚಿಕೆದಾರರಿಗೂ ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಕಲಾವಿದರು ಹಾಗೂ ಚಿತ್ರಮಂದಿರ ಮಾಲೀಕರನ್ನು ಪರಿಗಣನೆಗೆ ತಗೆದುಕೊಳ್ಳಬೇಕು ಎಂಬ ಒತ್ತಾಯ ಕೇಳಿ ಬರುತ್ತಿವೆ.
ಕೊರೊನಾ ಎಂಬ ಮಹಾಮಾರಿಯಿಂದ ಬಂದ್ ಆಗಿರುವ ಚಿತ್ರಮಂದಿರಗಳು ಮತ್ತೇ ಪ್ರಾರಂಭವಾಗಿ ಕನ್ನಡ ಚಿತ್ರ ಪ್ರೇಮಿಗಳಿಗೆ ಮನರಂಜನೆ ನೀಡಲಿ ಎನ್ನುವುದೇ ಎಲ್ಲರ ಆಶಯವಾಗಿದೆ.