ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಅರೆ ಮಲೆನಾಡು ಪ್ರದೇಶಗಳಾದ ಶಿವಮೊಗ್ಗ ಗ್ರಾಮಾಂತರ, ಶಿಕಾರಿಪುರ, ಸೊರಬ ಹಾಗೂ ಪಕ್ಕದ ಜಿಲ್ಲೆಯ ಹೊನ್ನಾಳಿ, ಬನವಾಸಿ ಹಾಗೂ ಹಿರೇಕೆರೂರು ಪ್ರದೇಶದಲ್ಲಿ ಇಂದಿಗೂ ಸಹ ಹೋರಿ ಬೆದರಿಸುವ ಹಾಗೂ ಹಿಡಿಯುವುದು ಇಲ್ಲಿನ ಯುವಕರಿಗೆ ಒಂದು ಕ್ರೇಜ್ ಎಂದರೆ ತಪ್ಪಾಗಲಾರದು. ನಗರ ಪ್ರದೇಶದಲ್ಲಿ ಹೊಸ ಮಾಡಲ್ ಕಾರು, ಬೈಕ್ ಖರೀದಿಸುವ ಕ್ರೇಜ್ ಹೇಗಿರುತ್ತದೆಯೂ ಅದೇ ರೀತಿ ಈ ಭಾಗದಲ್ಲಿ ಹೋರಿ ಸಾಕುವುದು, ಬೆದರಿಸುವುದು ಒಂದು ಕ್ರೇಜ್ ಆಗಿದೆ.
ತಾವು ಸಾಕಿದ ಹೋರಿಗಳನ್ನು ಬೆದರಿಸಲು ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗುತ್ತದೆ. ದೀಪಾವಳಿಯಿಂದ ಕಡೆ ಕಾರ್ತಿಕದ ತನಕ ಸುಮಾರು ಒಂದು ತಿಂಗಳುಗಳ ಕಾಲ ಹೋರಿ ಹಬ್ಬವನ್ನು ಆಚರಿಸಲಾಗುತ್ತದೆ. ಶಿವಮೊಗ್ಗ ಗ್ರಾಮಾಂತರ ಭಾಗ ಅಂದ್ರೆ, ಆಯನೂರು ಭಾಗದಿಂದ ಶಿಕಾರಿಪುರ, ಸೊರಬ, ಹೊನ್ನಾಳಿ, ಬನವಾಸಿ ಹಾಗೂ ಹಿರೇಕೆರೂರು, ಬ್ಯಾಡಗಿ ಭಾಗದಲ್ಲಿ ಪ್ರತಿ ಹೋಬಳಿ ಮಟ್ಟದಲ್ಲಿ ಹೋರಿ ಹಬ್ಬವನ್ನು ಸಂಪ್ರದಾಯದಂತೆ ನಡೆಸಿಕೊಂಡು ಬಂದಿದ್ದಾರೆ. ದಷ್ಟಪುಷ್ಟವಾಗಿ ವರ್ಷವಿಡಿ ಸಾಕಿದ ಹೋರಿಯನ್ನು ಹಿಡಿದವರಿಗೆ ಬಹುಮಾನ ನೀಡಲಾಗುತ್ತದೆ. ಈಗ ಹೋರಿ ಬೆದರಿಸುವ ಹಬ್ಬವನ್ನು ಅತ್ಯಂತ ಜಾಗರೂಕತೆಯಿಂದ ಆಚರಿಸಲಾಗುತ್ತದೆ.
ಹೋರಿ ಹಬ್ಬ ಮತ್ತು ಬಹುಮಾನ : ಹೋರಿ ಹಬ್ಬಕ್ಕೆ ವರ್ಷವಿಡಿ ಸಾಕಷ್ಟು ಕಾಳಜಿಯಿಂದ ದಷ್ಟಪುಟ್ಟವಾಗಿ ಸಾಕಿದ ಹೋರಿಯನ್ನು ಬಿಡಲಾಗುತ್ತದೆ. ಇಲ್ಲಿ ಹೋರಿಗಳ ಕೊರಳಿಗೆ, ಹೊಟ್ಟೆಗೆ ಒಣಕೊಬ್ಬರಿಯನ್ನು ಕಟ್ಟಿರಲಾಗುತ್ತದೆ. ಇದನ್ನು ಹರಿದುಕೊಂಡು ಬಂದವರಿಗೆ ಬಹುಮಾನವನ್ನು ನೀಡಲಾಗುತ್ತದೆ. ಬಹುಮಾನವಾಗಿ ಬೈಕ್, ಬಂಗಾರ, ಟಿವಿ, ಫ್ರಿಡ್ಜ್ ಸೇರಿದಂತೆ ರೈತರಿಗೆ ಉಪಯೋಗವಾಗುವ ವಸ್ತುಗಳನ್ನೇ ಇಡಲಾಗಿರುತ್ತದೆ.
ಇಲ್ಲಿ ಹೋರಿಗಳನ್ನು ಸ್ಪರ್ಧೆಗೆ ಬಿಡುವ ತಂಡಗಳು ಇರುತ್ತವೆ. ಅದೇ ರೀತಿ ಹೋರಿ ಹಿಡಿಯುವ ತಂಡಗಳು ಇರುತ್ತವೆ. ಹೋರಿಗಳನ್ನು ಸ್ಪರ್ಧೆಯಲ್ಲಿ ಓಡಿಸುವಾಗ ಅವುಗಳನ್ನು ಹಿಡಿಯಲು ಒಂದು ನಿರ್ದಿಷ್ಟ ಜಾಗವನ್ನು ಗುರುತಿಸಲಾಗಿರುತ್ತದೆ. ಹೋರಿ ಹಿಡಿಯುವವರು ಅದೇ ಜಾಗದಲ್ಲಿ ಹೋರಿಯನ್ನು ಹಿಡಿಯಬೇಕು ಅಂದ್ರೆ ಕೊಬ್ಬರಿಯನ್ನು ಹರಿಯಬೇಕು. ನಿರ್ದಿಷ್ಟ ಪ್ರದೇಶ ಬಿಟ್ಟು ಹೋರಿಯನ್ನು ಹಿಡಿದರೆ ಅದಕ್ಕೆ ಮಾನ್ಯತೆ ಇರುವುದಿಲ್ಲ.
ಜಲ್ಲಿ ಕಟ್ಟುವಿನಲ್ಲಿ ಹೋರಿಯನ್ನು ನಿರ್ದಿಷ್ಟ ಪ್ರದೇಶದಲ್ಲಿ ಅವುಗಳ ಭುಜವನ್ನು ಹಿಡಿದು ನಿಲ್ಲಿಸಬೇಕು. ಆದರೆ, ಇಲ್ಲಿ ಓಡುವ ಹೋರಿಗಳ ಕೊಬ್ಬರಿಯನ್ನು ಹರಿದರೆ ಸಾಕು. ಈ ಹಬ್ಬಕ್ಕಾಗಿ ಮೊದಲು ಚಿಕ್ಕಮಗಳೂರಿನ ಅಮೃತ್ ಮಹಲ್ ತಳಿಯ ಹೋರಿಯನ್ನು ಬಳಸಲಾಗುತ್ತಿತ್ತು. ಈಗ ಹಳ್ಳಿಕಾರು ಹಾಗೂ ತಮಿಳುನಾಡಿನ ಹೋರಿಗಳನ್ನು ತಂದು ವರ್ಷವಿಡಿ ಮನೆಯಲ್ಲಿ ಪೈಲ್ವಾನ್ಗಳನ್ನು ಸಾಕಲಾಗುತ್ತದೆಯೋ ಅದೇ ರೀತಿ ಹೋರಿಗಳನ್ನು ಸಾಕಿ ಅವುಗಳಿಗೆ ವ್ಯಾಯಾಮ ಮಾಡಿಸಲಾಗುತ್ತದೆ. ಇವುಗಳಿಗೆ ಬರ್ತಡೇ, ಪೋಟೊ ಶೂಟ್ ಸಹ ಮಾಡಿಸುವ ಕ್ರೇಜ್ ಇತ್ತೀಚೆಗೆ ಜಾಸ್ತಿ ಆಗಿದೆ.
ಪ್ರಾಚೀನ ಇತಿಹಾಸ : ಮಹಾಭಾರತದಲ್ಲಿ ವಿರಾಟ ರಾಜನ ಗೋವುಗಳನ್ನು ಪಾಂಡವರು ಬಿಡಿಸಿಕೊಂಡು ಬಂದಿರುತ್ತಾರೆ. ಇದರಿಂದ ಬಲಿಪಾಡ್ಯಮಿಯ ದಿನ ಹೋರಿ ಬೆದರಿಸುವ ಪಂದ್ಯವನ್ನು ಆಯೋಜಿಸಲಾಗುತ್ತದೆ. ವಿರಾಟ ರಾಜನ ಆಡಳಿತ ಇರುವ ಪ್ರದೇಶದಲ್ಲಿ ಮಾತ್ರ ಹೋರಿ ಬೆದರಿಸುವ ಹಬ್ಬ ಕಾಣಬಹುದಾಗಿದೆ.
ಹೋರಿಗಳಿಗೆ ವಿಶೇಷ ಹೆಸರು : ಹೋರಿಗಳಿಗೆ ವಿಶೇಷ ಹೆಸರುಗಳನ್ನು ಇಡುವುದು ವಾಡಿಕೆಯಾಗಿದೆ. ಭೈರವ, ಸಿಡಿಲಮರಿ, ಶಿಕಾರಿಪುರ ಭೂಪ, ಸೈನಿಕ ಹೀಗೆ ಹೆಸರಿಟ್ಟರೆ, ತಮ್ಮ ನೆಚ್ಚಿನ ನಟರ ಹೆಸರನ್ನು ಇಡುತ್ತಾರೆ. ರಾಕಿಂಗ್ ಸ್ಟಾರ್, ಚಾಲೆಜಿಂಗ್ ಸ್ಟಾರ್, 555, 999 ಹೀಗೆ ವಿಶೇಷವಾದ ಹೆಸರಿನಿಂದ ಇವುಗಳನ್ನು ಕರೆಯುತ್ತಾರೆ.
ಪ್ರತಿಷ್ಠೆಯ ಸಂಕೇತ : ಹೋರಿ ಹಬ್ಬ ಆಚರಣೆಯ ಕುರಿತು ಜಾನಪದ ಉಪನ್ಯಾಸಕರಾದ ಮೋಹನ್ ಚಂದ್ರಗುತ್ತಿ ಮಾಹಿತಿ ನೀಡಿದ್ದು, ಹೀಗೆ ಹೋರಿ ಬಿಡುವುದಕ್ಕೆ ಪ್ರಾಚೀನವಾದ ಇತಿಹಾಸವಿದೆ. ಪ್ರಾಚೀನ ಮೆಸಪಟೋಮಿಯಾದಲ್ಲಿ ಗಿಲ್ ಗಮೇಶ್ ಎಂಬ ಮಹಾಕಾವ್ಯ ಬರುತ್ತದೆ. ಅಲ್ಲಿನ ವೀರನೋರ್ವ ಗೂಳಿ ಕಾಳಗವನ್ನು ನಡೆಸುತ್ತಾನೆ. ಸ್ಪೇನ್ ಮತ್ತು ರೋಮ್ನಲ್ಲಿ ಗೂಳಿ ಕಾಳಗದ ದೊಡ್ಡ ಕೃತಿಗಳು ಹಾಗೂ ಚಿತ್ರಗಳು ಸಿಗುತ್ತವೆ. ಇದರಂತೆ ಸಿಂಧೂ ನಾಗರಿಕತೆಯಲ್ಲಿ ಗೂಳಿಯ ಚಿತ್ರವನ್ನು ನೋಡುತ್ತೇವೆ. ಗೂಳಿ ಸಾಕುವುದು ಒಂದು ಪರಂಪರೆ ಆಗಿದ್ದರೆ, ಇನ್ನೊಂದು ಪ್ರತಿಷ್ಟೆಯ ಸಂಕೇತವಾಗಿತ್ತು.
ಭಾರತದಲ್ಲಿ ಪಶುಪಾಲನೆ ಆರಂಭವಾದ ಮೇಲೆ, ಪಶು ಸಂಪತ್ತನ್ನು ಬೆಳೆಸುವುದರ ಜೊತೆಗೆ ಗೂಳಿ ಬೆಳೆಸಿ ವ್ಯವಸಾಯ ಮಾಡುವ ಪದ್ದತಿ ಆರಂಭವಾಯ್ತು. ಗೂಳಿಯನ್ನು ಸಾಕುವ ಮನರಂಜನೆಯ ರೂಪಕವಾಗಿ ಗೂಳಿಯನ್ನು ಬಳಸಿಕೊಳ್ಳಲಾಯಿತು. ಮನರಂಜನೆಯ ನಂತರದಲ್ಲಿ ಅದನ್ನು ಓಡಿಸುವ ಪ್ರವೃತ್ತಿ ಪ್ರಾರಂಭವಾಯಿತು. ಭಾರತದಲ್ಲಿ ಬಲಿಚಕ್ರವರ್ತಿಯಂತಹ ಧೀರೋದತ್ತ ನಾಯಕನನ್ನು ಕ್ರೌರ್ಯದಲ್ಲಿ ಕೊಂದ ಮೇಲೆ, ಅವನು ಭೂಮಿಗೆ ಬಂದಾಗ ಹೋರಿಗಳಿಗೆ ಬಣ್ಣ ಹಚ್ಚಿ ಊರಿನಲ್ಲಿ ಓಡಿಸುವುದು ಒಂದು ಆನಂದದ ಅನುಭವವಾಗಿತ್ತು.
ಸ್ಪರ್ಧೆಯ ರೂಪದಲ್ಲಿ ಅಣಿಗೊಳಿಸಲಾಗಿದೆ: ಇಲ್ಲಿಂದಲೇ ಗೂಳಿಗಳನ್ನು ಸಾಕಿ, ಓಡಿಸುವ ಪದ್ದತಿ ಬೆಳೆಯಿತು. ಸಹ್ಯಾದ್ರಿ ಶ್ರೇಣಿಯಲ್ಲಿ ಗೂಳಿ ಓಡಿಸುವ ಮೂಲಕ ಅದನ್ನು ಸ್ಪರ್ಧೆಯ ರೂಪದಲ್ಲಿ ಅಣಿಗೊಳಿಸಲಾಗಿದೆ. ಹೋರಿಗಳನ್ನು ದಷ್ಟಪುಷ್ಟವಾಗಿ ಸಾಕಿ ತಾವೇ ಓಡಿಸುವ ಮೂಲಕ ಸಂಭ್ರಮ ಪಡುವ ಆನಂದ ಪಡುವ ಜನರ ಆಲೋಚನಾ ಕ್ರಮ ಕ್ರಿಯಾಶೀಲತೆಯ ಪ್ರತೀಕವಾಗಿದೆ. ಇದು ಒಂದು ಜಾನಪದ ಆಚರಣೆ. ಹೋರಿಗಳಿಗೆ ಹೆಸರು ಕೊಟ್ಟು ಪ್ರೀತಿಯಿಂದ ಓಡಿಸುವುದೇ ಒಂದು ಅದ್ಬುತವಾಗಿದೆ ಎಂದರು.
ಹೋರಿ ಹಬ್ಬ ಕಂಬಳ ಹಾಗೂ ಜಲ್ಲಿಕಟ್ಟಿನಂತೆ ಜನಪ್ರಿಯವಾಗಬೇಕು: ಶಿಕಾರಿಪುರದ ಹೋರಿ ಹಬ್ಬ ಹೋರಾಟ ಸಮಿತಿಯ ಅಧ್ಯಕ್ಷರು, ವಕೀಲರಾದ ಶಿವರಾಜ್ ಅವರು ಮಾತನಾಡಿ, ಹೋರಿ ಬೆದರಿಸುವ ಆಟ ಶಿಕಾರಿಪುರದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಶಿಕಾರಿಪುರ, ಸೊರಬ, ಬನವಾಸಿ, ಹೊನ್ನಾಳಿ ಹಾಗೂ ಶಿವಮೊಗ್ಗ ಗ್ರಾಮಾಂತರ ಹಾಗೂ ಹಾವೇರಿ ಜಿಲ್ಲೆಯ ಹಿರೇಕೆರೂರು, ಬ್ಯಾಡಗಿ, ಹಾವೇರಿ ಭಾಗದಲ್ಲಿ ಹೋರಿ ಬೆದರಿಸುವ ಹಬ್ಬದ ಆಚರಣೆಯನ್ನು ನೋಡಬಹುದು ಎಂದರು.
ಹೋರಿ ಹಬ್ಬ ರಾಷ್ಟ್ರ ಮಟ್ಟದಲ್ಲಿ ಬೆಳೆಯಬೇಕು: ಇತ್ತೀಚಿಗೆ ತಮಿಳುನಾಡಿನಿಂದ ಹೋರಿಯನ್ನು ತಂದು ಪಳಗಿಸಿ, ಹತ್ತಿ ಕಾಳು, ಹಿಂಡಿಯನ್ನು ನೀಡಿ ಉತ್ತಮವಾಗಿ ಮೇಯಿಸಲಾಗುತ್ತಿದೆ. ನಿತ್ಯ ಹೋರಿಗಳಿಗೆ ವ್ಯಾಯಾಮವನ್ನು ಸಹ ಮಾಡಿಸಿ ಹಬ್ಬಕ್ಕೆ ತಯಾರು ಮಾಡುತ್ತಾರೆ. ಹೋರಿಗಳಿಗೆ ಅಲಂಕಾರ ಮಾಡಿ, ಅವುಗಳಿಗೆ ಫೋಟೋ ಶೂಟ್ ಮಾಡುವ ಮೂಲಕ ಹಬ್ಬವನ್ನು ಆಚರಣೆ ಮಾಡಿಕೊಂಡು ಬಂದಿದ್ದಾರೆ. ಹೋರಿ ಹಬ್ಬ ರಾಷ್ಟ್ರ ಮಟ್ಟದಲ್ಲಿ ಬೆಳೆಯಬೇಕು. ಕಂಬಳ ಹಾಗೂ ಜಲ್ಲಿ ಕಟ್ಟಿನ ರೀತಿ ಬೆಳೆಯಬೇಕು ಎಂದು ಹೇಳಿದರು.
ಇದನ್ನೂ ಓದಿ : ಹಾವೇರಿ: ದನ ಬೆದರಿಸುವ ಸ್ಪರ್ಧೆಯಲ್ಲಿ 300ಕ್ಕೂ ಹೆಚ್ಚು ಹೋರಿಗಳು, ರೋಚಕ ಕ್ರೀಡೆ ಕಣ್ತುಂಬಿಕೊಂಡ ಜನ