ಬೆಂಗಳೂರು: ಬಂಗಾಳ ಕೊಲ್ಲಿಯ ನೌರುತ್ಯ ಉಪಸಾಗರದಲ್ಲಿ ಸಣ್ಣ ಚಂಡಮಾರುತ ಉಂಟಾಗಿದ್ದು, ಅದು 3.1 ಕಿಮೀ ಎತ್ತರದಲಿದ್ದು ಇದರ ಪ್ರಭಾವದಿಂದ ರಾಜ್ಯದಲ್ಲಿ ಹಿಂಗಾರು ಮಳೆ ಇನ್ನೂ ಮುಂದುವರೆದಿದೆ. ಅದರಿಂದ ಇನ್ನೆರಡು ದಿನ ಮುಖ್ಯವಾಗಿ ದಕ್ಷಿಣ ಒಳನಾಡಿನಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ.
ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಬೆಂಗಳೂರು ಹವಾಮಾನ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಸಿ.ಎಸ್. ಪಾಟೀಲ್, ಪ್ರಮುಖವಾಗಿ ಮಂಡ್ಯ, ರಾಮನಗರ, ಬೆಂಗಳೂರು, ಕೋಲಾರ, ಕೊಡಗು ಮತ್ತು ಚಿಕ್ಕಬಳ್ಳಾಪುರಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಆದರೆ, ನವೆಂಬರ್ 12 ರಿಂದ 14 ರಂದು ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿ ಸಹ ಇದೆ ವೇಳೆಯಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ. ಹಿಂಗಾರು ಡಿಸೆಂಬರ್ 15ರ ನಂತರ ಪೂರ್ತಿಯಾಗಿ ರಾಜ್ಯದಲ್ಲಿ ಹಿಂದೆ ಸರಿಯಲಿದೆ. ಈ ಬಾರಿ ಹಿಂಗಾರು ಮತ್ತು ಮುಂಗಾರು ಮಳೆ ವಾಡಿಕೆಯಂತೆಯಾಗಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ಕೆಲವೆಡೆ ಮಳೆಯ ಕೊರತೆ ಕಂಡು ಬಂದಿದೆ. ಆದರೆ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರಿನಲ್ಲಿ ಮುಂಗಾರಿನ ಕೊರತೆ ಕಂಡು ಬಂದಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ತಾಪಮಾನ ಸಾಮಾನ್ಯ: ಸದ್ಯ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಗರಿಷ್ಟ ಉಷ್ಣಾಂಶ ಸರಾಸರಿ 29 ಡಿಗ್ರಿ ದಾಖಲಾಗುತ್ತಿದೆ. ಕನಿಷ್ಠ ಉಷ್ಣಾಂಶ ಸರಿಸುಮಾರು 18 ಡಿಗ್ರಿ ಇದೆ. ಇದು ಅಷ್ಟು ವ್ಯತಿರಿಕ್ತ ಉಷ್ಣಾಂಶವಲ್ಲ. ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಿನ ಉಷ್ಣಾಂಶ ದಾಖಲಾಗಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ತಾಪಮಾನ ಸಾಮಾನ್ಯ ಮಟ್ಟದಲ್ಲಿದ್ದು, ಡಿಸೆಂಬರ್ ನಂತರ ಉಷ್ಣಾಂಶ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಡಿಸೆಂಬರ್ ನಿಂದ ಚಳಿ ಪ್ರಾರಂಭ: ಸಿಲಿಕಾನ್ ಸಿಟಿಯಲ್ಲಿ ಡಿಸೆಂಬರ್ನಲ್ಲಿ 16 ಡಿಗ್ರಿ ಮತ್ತು ಜನವರಿಯಲ್ಲಿ 13 ಡಿಗ್ರಿ ದಾಖಲಾಗುವ ಸಾಧ್ಯತೆ ಇದೆ. ಮುಂದಿನ ಒಂದೆರಡು ತಿಂಗಳಲ್ಲಿ ಉತ್ತರ ಒಳನಾಡಿನ ಬೀದರ್, ಕಲಬುರಗಿ, ಬೆಳಗಾವಿ, ಗದಗ, ವಿಜಯಪುರ, ಕೊಪ್ಪಳದಲ್ಲಿ 10 ರಿಂದ 12 ಡಿಗ್ರಿ ದಾಖಲಾಗುವ ಸಂಭವವಿದೆ. ದಕ್ಷಿಣ ಒಳನಾಡಿನಲ್ಲಿ ಮಂಜು ಇನ್ನೊಂದು ವಾರ ಅಷ್ಟಾಗಿ ಕಂಡುಬರುವ ಸಾಧ್ಯತೆ ಇರುವುದಿಲ್ಲ. ವಿಸಿಬಲಿಟಿ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ. ವಿಮಾನ ಸಂಚಾರಕ್ಕೆ ಕೂಡ ಹೆಚ್ಚಿನ ತೊಡಕು ಉಂಟಾಗುವ ಸಾಧ್ಯತೆ ಇಲ್ಲ. ಸ್ವಲ್ಪ ಮೋಡ ಕವಿದ ವಾತಾವರಣವೇ ಇರಲಿದೆ ಎಂದು ಹೇಳಿದರು.
ಅಕ್ಟೋಬರ್ನಿಂದ ಡಿಸೆಂಬರ್ವರಗೆ ಚಂಡಮಾರುತಗಳು ಸಾಮಾನ್ಯ: ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಚಂಡಮಾರುತಗಳು ಸಾಮಾನ್ಯವಾಗಿದೆ. ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಒಂದಿಲ್ಲೊಂದು ಕಡೆ ಚಂಡಮಾರುತಗಳು ಉಂಟಾಗುತ್ತವೆ ಎಂದು ಸಿ.ಎಸ್.ಪಾಟೀಲ್ ಇದೇ ವೇಳೆ ಮಾಹಿತಿ ನೀಡಿದರು.
ಇದನ್ನೂ ಓದಿ: ಜಗತ್ತಿನ ಅತ್ಯಂತ ಮಲಿನ ನಗರ ಯಾವುದು ಗೊತ್ತೆ? ಇದು ನಮ್ಮ ನೆರೆ ದೇಶದಲ್ಲೇ ಇದೆ!