ಹುಬ್ಬಳ್ಳಿ: ಕಳೆದ ವರ್ಷ ಸುರಿದ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ತಲೆದೂರಿತ್ತು. ಪ್ರವಾಹದಿಂದಾಗಿ ಮನೆ ಕಳೆದುಕೊಂಡು ಜನರ ಬದುಕು ಬೀದಿಗೆ ಬಂದಿತ್ತು. ಆದರೆ ಈ ವರ್ಷ ಜೀವನ ಸುಧಾರಿಸುತ್ತಿರುವಗಲೇ ಇದೀಗ ಕೊರೊನಾ ವೈರಸ್ನಿಂದ ಜನರ ಬದುಕು ದುಸ್ತರವಾಗಿದೆ.
ಧಾರವಾಡ ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಇಟ್ಟಿಗೆ ಬಟ್ಟಿಗಳಿವೆ. ಪ್ರತಿಯೊಂದು ಇಟ್ಟಿಗೆ ತಯಾರಿಸುವ ಬಟ್ಟಿಯಲ್ಲಿ 10ರಿಂದ 15 ಜನರು ಕೆಲಸ ಮಾಡುತ್ತಿದ್ದರು. ಆದರೆ ಕಳೆದ 40 ದಿನಗಳಿಂದ ಇಟ್ಟಿಗೆ ಬಟ್ಟಿ ಕಾರ್ಮಿಕರಿಗೆ ಕೆಲಸ ಸ್ಥಗಿತಗೊಂಡಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ.
ಹುಬ್ಬಳ್ಳಿಯ ಗೋಕುಲ ರಸ್ತೆ ಹಾಗೂ ಧಾರವಾಡದ ಕೇಲಗೆರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇಟ್ಟಿಗೆ ಬಟ್ಟಿಗಳು ಸಂಪೂರ್ಣವಾಗಿ ಬಂದ್ ಆಗಿವೆ. ಡಿಸೆಂಬರ್, ಜನವರಿ, ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಇಟ್ಟಿಗೆಗಳಿಗೆ ಭಾರಿ ಬೇಡಿಕೆ ಇರುತ್ತದೆ.

ಈ ತಿಂಗಳಗಲ್ಲಿ ಇಟ್ಟಿಗೆ ತಯಾರಿಸುವವರು ಲಕ್ಷಾಂತರ ರೂಪಾಯಿ ಹಣ ಗಳಿಸುತ್ತಿದ್ದರು. ಆದರೆ ಕೊರೊನಾ ವೈರಸ್ ಹರಡದಂತೆ ಕೈಗೊಂಡಿರುವ ಲಾಕ್ ಡೌನ್ನಿಂದಾಗಿ ಇಟ್ಟಿಗೆ ಬಟ್ಟಿಗಳು ಬಂದ್ ಆಗಿವೆ. ಇಲ್ಲಿ ಕೆಲಸ ಮಾಡುವ ನೂರಾರು ಕಾರ್ಮಿಕರಿಗೆ ಇಂದು ಉದ್ಯೋಗ ಇಲ್ಲದಂತಾಗಿದೆ.

ಕಳೆದ ವರ್ಷ ಸುರಿದ ಮಳೆಯಿಂದಾಗಿ ಅಲ್ಪ ಪ್ರಮಾಣದಲ್ಲಿ ವ್ಯಾಪಾರ ವಹಿವಾಟು ಆಗಿತ್ತು. ಈಗ ಕಳೆದ ನಲವತ್ತು ದಿನಗಳಿಂದ ಮನೆ ಕಟ್ಟಲು ಯಾರೂ ಇಟ್ಟಿಗೆಗಳನ್ನು ಖರೀದಿಸಲು ಬರುತ್ತಿಲ್ಲ. ಹೀಗಾಗಿ ಜೀವನ ನಿರ್ವಹಣೆ ಹೇಗೆ ಎಂಬ ಚಿಂತೆಯಲ್ಲಿ ಇಟ್ಟಿಗೆ ಬಟ್ಟಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಬಟ್ಟಿ ಮಾಲೀಕರು ಇದ್ದಾರೆ.