ಧಾರವಾಡ: ತವರಿಗೆ ಹೂವು ತರುವೆ ಹೊರತು, ಹುಲ್ಲು ತರೋಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಭಾವುಕರಾಗಿ ನುಡಿದಿದ್ದಾರೆ.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ಚನ್ನವೀರಗೌಡ ಅಣ್ಣಾ ಪಾಟೀಲ ಸಂಸ್ಮರಣಾ ದತ್ತಿ ಹಾಗೂ ಟ್ರಸ್ಟ್ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ನಾನು ನಿಮ್ಮವನು, ನಿಮ್ಮೂರಿನ ಹುಡುಗ. ಕ್ಷೇತ್ರದ ಜನ, ನಮ್ಮ ಪ್ರಧಾನಮಂತ್ರಿ, ಗೃಹ ಸಚಿವರು, ಹಿರಿಯರ ಆಶೀರ್ವಾದದಿಂದ ಮುಖ್ಯಮಂತ್ರಿ ಆಗಿದ್ದೇನೆ. ಪಕ್ಷದ ಶಾಸಕರು, ಸಚಿವರು ಸಂಪೂರ್ಣ ಸಹಕಾರ ಕೊಡುತ್ತಿದ್ದಾರೆ ಎಂದರು.
ನನ್ನ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇದೆ. ಅದರ ಅರಿವು ನನಗಿದೆ. ಪ್ರತಿದಿನ 10 ರಿಂದ 15 ಗಂಟೆ ಕೆಲಸ ಮಾಡುತ್ತಿರುವೆ. ಅದನ್ನು ಮುಂದುವರೆಸುವೆ. ಆಮೂಲಾಗ್ರವಾದ ಬದಲಾವಣೆಯನ್ನು ಈ ನಾಡಿನಲ್ಲಿ ಮಾಡುವೆ. ಆ ಸಂಕಲ್ಪ ಮಾಡುವೆ. ಆ ನಿಟ್ಟಿನಲ್ಲಿ ಕೆಲಸ ಮಾಡುವೆ ಎಂದು ಹೇಳಿದರು.
ನಿಮ್ಮೆಲ್ಲರ ವಿಶ್ವಾಸ, ನಂಬಿಕೆ ಹುಸಿಗೊಳಿಸಲಾರೆ. ಮದುವೆಯಾಗಿ ಹೆಣ್ಣು ಮಗಳು ತವರಿಗೆ ಹೋಗುವಾಗ ಒಂದು ಮಾತು ಹೇಳುತ್ತಾಳೆ. ತವರಿಗೆ ಹೂವು ತರುವೆನೆ ಹೊರತು, ಹುಲ್ಲನ್ನು ಅಲ್ಲ ಅಂತಾ. ಹಾಗೆಯೇ ನಾನು ಹೂವು ತರುವೆ ಹೊರತಾಗಿ ಹುಲ್ಲು ತರಲ್ಲ ಎಂದು ಭಾವುಕರಾಗಿ ನುಡಿದರು.
ಈ ಹಿಂದೆ ತವರು ಜಿಲ್ಲೆ ಹಾವೇರಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಭಾವುಕರಾಗಿ ಮಾತನಾಡಿದ್ದ ಸಿಎಂ ಬೊಮ್ಮಾಯಿ ಅಧಿಕಾರ, ಅಂತಸ್ತು ಯಾರಿಗೂ ಶಾಶ್ವತವಲ್ಲ ಎಂದು ನುಡಿದಿದ್ದು ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗಿತ್ತು.
ಇದನ್ನೂ ಓದಿ: ರಾಜಕೀಯಕ್ಕಾಗಿ ಕಾಂಗ್ರೆಸ್ನಿಂದ ಮೇಕೆದಾಟು ಪಾದಯಾತ್ರೆ: ಸಿಎಂ ಬೊಮ್ಮಾಯಿ