ಹುಬ್ಬಳ್ಳಿ: ನೇರ ವೇತನ, ನೇರ ನೇಮಕಾತಿ ಅನುಷ್ಠಾನಕ್ಕಾಗಿ ಹು-ಧಾ ಮಹಾನಗರ ಪಾಲಿಕೆಯ ಗುತ್ತಿಗೆ ಪೌರ ಕಾರ್ಮಿಕರು ಹಲವು ದಿನಗಳಿಂದ ಪ್ರತಿಭಟಿಸುತ್ತಿದ್ದಾರೆ. ಆದರೆ, ಕೆಲ ಜನರು ಸಂಘದ ಹೆಸರು ಕೆಡಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದು ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆ ಪೌರ ಕಾರ್ಮಿಕರ ಸಂಘ ನಿರಂತರ ಹೋರಾಟ ನಡೆಸುವ ಮೂಲಕ ಕನಿಷ್ಠ ವೇತನ, ಉಪಹಾರ ಭತ್ಯೆ, ಮಾಸ್ಟರ್ ಚೆಕ್ ಅಪ್, ಬಯೋಮೆಟ್ರಿಕ್ ಹಾಜರಾತಿ, ತುಟ್ಟಿಭತ್ಯೆ, ಸುರಕ್ಷಾ ಸಾಧನಗಳು, ಕೆಲಸದ ಪರಿಕರಗಳನ್ನು ದೊರಕಿಸಿಕೊಡಲಾಗಿದೆ.
ಅಲ್ಲದೇ, ಗುತ್ತಿಗೆ ಪದ್ದತಿ ರದ್ದು ಪಡಿಸಲು ಆಗ್ರಹಿಸಿ ರಾಜ್ಯಾದ್ಯಂತ ಪೌರಕಾರ್ಮಿಕ ಸಂಘಟನೆಗಳ ನಿರಂತರ ಹೋರಾಟಗಳ ಪರಿಣಾಮವಾಗಿ ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನೇರವಾಗಿ ಪಾವತಿಗೆ ಆದೇಶ ನೀಡಿದ್ದರು. ಆದರೂ ಸಹ ಹು-ಧಾ ಮಹಾನಗರ ಪಾಲಿಕೆಯಲ್ಲಿ ನೇರ ವೇತನ, ನೇರ ನೇಮಕಾತಿ ಅನುಷ್ಠಾನಗೊಂಡಿಲ್ಲ.
ಈ ಹಿನ್ನೆಲೆಯಲ್ಲಿ ಮತ್ತೆ ಗುತ್ತಿಗೆ ಪೌರಕಾರ್ಮಿಕರು ಕಳೆದ 18 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಆದರೆ ಕೆಲ ಕಾಣದ ಕೈಗಳು ಪಿತೂರಿ ನಡೆಸುತ್ತಿವೆ. ಇವರು ಇಲ್ಲ-ಸಲ್ಲದ ಆರೋಪ ಮಾಡುವ ಬದಲು ಬಹಿರಂಗ ಚರ್ಚೆಗೆ ಬರಲಿ ಎಂದರು.