ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಎಂಬುವಂತ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ ಧಾರವಾಡ ಅವಳಿನಗರ ಈಗ ಮತ್ತೊಂದು ಗೌರವದ ಗರಿಯನ್ನು ಮುಡಿಗೇರಿಸಿಕೊಳ್ಳಲು ಸಿದ್ಧವಾಗಿದೆ. ಸಾಕಷ್ಟು ಯೋಜನೆ ಮೂಲಕ ಜನಮನ್ನಣೆ ಪಡೆದಿರುವ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಈಗ ಫ್ಲೈಯಿಂಗ್ ಟ್ರೈನಿಂಗ್ ಸೆಂಟರ್ ಕೂಡ ಆರಂಭ ಮಾಡುವ ಕಾಲ ಸನ್ನಿಹಿತವಾಗುತ್ತಿದೆ.
ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಫ್ಲೈಯಿಂಗ್ ಟ್ರೈನಿಂಗ್ ಸೆಂಟರ್ (FTC) ಅನ್ನು ಸ್ಥಾಪಿಸಲು ನಾಗರಿಕ ವಿಮಾನಯಾನ ಸಚಿವಾಲಯ ಚಿಂತನೆ ನಡೆಸಿದೆ. ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಹುಬ್ಬಳ್ಳಿಯಲ್ಲಿ FTC ಕೇಂದ್ರವನ್ನು ಸ್ಥಾಪಿಸಲು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಹಾಗೂ ಕೇಂದ್ರ ಸಚಿವರಿಗೆ ಅನುಮೋದಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಿಮಾನ ಚಾಲನಾ ತರಬೇತಿ ಕೇಂದ್ರ ಆರಂಭವಾಗುತ್ತಿದ್ದು, ಪೈಲಟ್ ಆಗಲಿಚ್ಛಿಸುವವರಿಗೆ ಅನುಕೂಲವಾಗಲಿದೆ. ರಾಜ್ಯದ ಎರಡನೇ ರಾಜಧಾನಿಯಾಗಿ ಹೊರಹೊಮ್ಮುತ್ತಿರುವ ಹುಬ್ಬಳ್ಳಿಗೆ ಮತ್ತೊಂದು ಹಿರಿಮೆ ದೊರೆಯಲಿದೆ. ದೇಶದಲ್ಲಿ ವಿಮಾನ ಚಾಲನೆ ಮಾಡುವ ಪೈಲಟ್ಗಳ ಕೊರತೆಯನ್ನು ನೀಗಿಸಲು ಆರು ವಿಮಾನ ತರಬೇತಿ ಸಂಸ್ಥೆಗಳನ್ನು ದೇಶಾದ್ಯಂತ ಕೇಂದ್ರ ಸರಕಾರ ಸ್ಥಾಪಿಸುತ್ತಿದ್ದು, ಉತ್ತರ ಕರ್ನಾಟಕದಲ್ಲಿ ಯಾವುದೇ ವೈಮಾನಿಕ ಶಾಲೆಗಳು ಇಲ್ಲದಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಖ್ಯಾತಿವೆತ್ತ ಹುಬ್ಬಳ್ಳಿಯಲ್ಲಿ ಈ ತರಬೇತಿ ಕೇಂದ್ರ ತಲೆ ಎತ್ತಲಿರುವುದು ಈ ಭಾಗದ ಜನತೆಗೆ ಸಂತೋಷಕರ ವಿಷಯವಾಗಿದೆ.
ಇದನ್ನೂ ಓದಿ:ಮುಂದಿನ 5 ವರ್ಷಗಳಲ್ಲಿ 400 ಶತಕೋಟಿ ಡಾಲರ್ ಡಿಜಿಟಲ್ ಆರ್ಥಿಕತೆಯ ಗುರಿ: ಸಚಿವ ಅಶ್ವತ್ಥನಾರಾಯಣ