ಧಾರವಾಡ: ಪ್ರತ್ಯೇಕ ಲಿಂಗಾಯತ ಧರ್ಮ ವಿರೋಧಿಸಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಕಿದ್ದ ಶೃತಿ ಬಂಧನವನ್ನು ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸಿತು. ಬಿಜೆಪಿ ಗ್ರಾಮಾಂತರ ಹಾಗೂ ವಿವಿಧ ಘಟಕಗಳು ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಸಂಸದ ಜೋಶಿ ನೇತೃತ್ವ ವಹಿಸಿದ್ದರು.
ಶೃತಿ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿರುವ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಮಾನವ ಹಕ್ಕು ಆಯೋಗ, ಕೇಂದ್ರ ಮಹಿಳಾ ಆಯೋಗ, ರಾಜ್ಯ ಮಹಿಳಾ ಆಯೋಗ ಹಾಗೂ ರಾಜ್ಯಪಾಲರಿಗೆ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿತು.
ಪುರುಷ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವಾರು ಪೊಲೀಸರು ವಾಹನಗಳಲ್ಲಿ ಏಕಾಏಕಿ ಮಹಿಳೆ ಮನೆಗೆ ತೆರಳಿದ್ದಲ್ಲದೇ, ಅವರಿಗೆ ಯಾವುದೇ ವಿಷಯವನ್ನೂ ತಿಳಿಸದೇ, ಶೃತಿ ಮತ್ತು ಅವರ ಪತಿಯ ಮೊಬೈಲ್ ವಶಪಡಿಸಿಕೊಂಡು ಶೃತಿ ವಶಕ್ಕೆ ಪಡೆಯಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿದ ಶೃತಿ ಬೆಳ್ಳಕ್ಕಿ, ನನ್ನ ಬಂಧನದ ಹಿಂದೆ ಹಲವು ಜನರ ಕೈವಾಡವಿದೆ. ನಾನು ನಮ್ಮ ದೇಶದ ಕಾನೂನಿನ ಮೇಲೆ ನಂಬಿಕೆ ಇಟ್ಟವಳು. ಕಾನೂನಿನ ಪ್ರಕಾರ ಹೋರಾಟ ನಡೆಸುತ್ತೇನೆ ಎಂದು ಘೋಷಿಸಿದರು.