ಹುಬ್ಬಳ್ಳಿ: ಜೀವನದ ಸಾರ ತಿಳಿದುಕೊಳ್ಳಬೇಕೆಂದರೆ ಭಗವದ್ಗೀತೆಯನ್ನು ಓದಬೇಕು. ಜೀವನದಲ್ಲಿ ಸಮಸ್ಯೆ ಬಂದರೆ ಭಗವದ್ಗೀತೆಯ ಒಂದು ಪುಟ ತೆಗೆದು ನೋಡಿ, ಎಲ್ಲ ಸಮಸ್ಯೆಗಳಿಗೂ ಮುಕ್ತಿ ಸಿಗುತ್ತದೆ. ನನಗೂ ಇದರ ಅನುಭವವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹುಬ್ಬಳ್ಳಿಯ ಭಗವದ್ಗೀತೆ ಜ್ಞಾನಲೋಕಾರ್ಪಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಗವದ್ಗೀತೆ ಓದಿನಿಂದ ಎಲ್ಲ ಸಮಸ್ಯೆಗಳಿಗೂ ಮುಕ್ತಿ ಸಿಗುತ್ತದೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತಹ ಜ್ಞಾನವನ್ನು ಭಗವದ್ಗೀತೆ ನೀಡುತ್ತದೆ. ಭಗವದ್ಗೀತೆ ಜಗತ್ತಿನ ಶ್ರೇಷ್ಠ ಧರ್ಮಗ್ರಂಥ. ಈ ನಿಟ್ಟಿನಲ್ಲಿ ಈಶ್ವರಿ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಕಾರ್ಯ ಅದ್ಬುತ ಎಂದರು.
ಭಗವದ್ಗೀತೆ ಎಲ್ಲರಿಗೂ ಗೊತ್ತಗಾಲಿ ಎನ್ನುವುದಕ್ಕೆ, ಈ ಜ್ಞಾನಲೋಕ ಮ್ಯೂಸಿಯಂ ನಿರ್ಮಿಸಿದ್ದಾರೆ. ಧರ್ಮ ಶ್ರೇಷ್ಠವಾದ ಭಾರತ ನಮ್ಮದಾಗಬೇಕು. ಅದುವೇ ನಮ್ಮ ಪ್ರಧಾನಿ ಮೋದಿಯವರ ಕನಸು. ಅಸತ್ಯ ಸತ್ಯದ ಮೇಲೆ ಆಡಳಿತ ನಡೆಸುತ್ತಿದೆ. ಅನ್ಯಾಯ ನ್ಯಾಯದ ಮೇಲೆ ಪರಾಕ್ರಮ ಮಾಡುತ್ತಿದೆ. ಮೌಲ್ಯಯುತ ಸಮಾಜ ನಿರ್ಮಾಣ ಮಾಡೋಕೆ ಸಂಕಲ್ಪ ಮಾಡೋಣ ಎಂದು ಸಿಎಂ ಹೇಳಿದರು.
ಹುಬ್ಬಳ್ಳಿಯ ಹೊರವಲಯದಲ್ಲಿರುವ ಗೋಕುಲ ಗ್ರಾಮದ ದಾರವತಿ ಆಂಜನೇಯ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಆಗಮಿಸಿದ ಸಿಎಂ, ದಾರವತಿ ಆಂಜನೇಯನ ದರ್ಶನ ಪಡೆದರು. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೂಡ ಆಗಮಿಸಿದರು. ಸಿಎಂ ಮತ್ತು ಕೇಂದ್ರ ಸಚಿವರನ್ನು ದೇಗುಲದ ಆಡಳಿತ ಮಂಡಳಿ ಸನ್ಮಾನಿಸಿ ಅಭಿನಂದಿಸಿದರು.
ಇದನ್ನೂ ಓದಿ: ಧಾರವಾಡ ತತ್ವಜ್ಞಾನದ ಭಂಡಾರ, ಇಡೀ ಲೋಕಕ್ಕೆ ಬೆಳಕು ಕೊಡುವ ಶಕ್ತಿ ಇಲ್ಲಿದೆ: ಸಿಎಂ ಬೊಮ್ಮಾಯಿ