ಹುಬ್ಬಳ್ಳಿ: ಹುಲಿ ಕಾಣಿಸಿಕೊಂಡಿದ್ದ ಕಲಘಟಗಿ ತಾಲೂಕಿನ ಬೆಂಡಲಗಟ್ಟಿ ಗ್ರಾಮದ ಜನರಲ್ಲಿ ಆತಂಕ ಇನ್ನು ದೂರವಾಗಿಲ್ಲ. ದಿನಕ್ಕೊಂದು ಜಾಗ ಬದಲಿಸುತ್ತಿರುವ ಹುಲಿ ಅರಣ್ಯ ಇಲಾಖೆಯ ನಿದ್ದೆಗೆಡಿಸಿದೆ.
ಬೆಂಡಲಗಟ್ಟಿ ವ್ಯಾಪ್ತಿಯಿಂದ ಫೆ.10ರ ತಡರಾತ್ರಿ ಸಂಚರಿಸಿರಬಹುದೆನ್ನಲಾದ ಹುಲಿಯು, 11ರಂದು ಬೆಳಗಿನ ಸಮಯದಲ್ಲಿ ತಾಲೂಕಿನ ತಬಕದಹೊನ್ನಿಹಳ್ಳಿ ಸನಿಹದ ಹುಣಸಿಕಟ್ಟಿ ಜಮೀನಿನಲ್ಲಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ನಂತರ ಸಂಜೆ ಸಮಯದಲ್ಲಿ ಮುಂಡಗೋಡ ತಾಲೂಕಿನ ವಡಗಟ್ಟಾ ಚೆಕ್ ಪೋಸ್ಟ್ ಬಳಿ ಕೆರೆಯಲ್ಲಿ ನೀರು ಕುಡಿದಿದೆ ಎಂಬ ಮಾಹಿತಿಯನ್ನು ಕೆಲ ರೈತರು ನೀಡಿದ್ದಾರೆ. ಫೆ.12 ರಂದು ಯಲ್ಲಾಪುರ ತಾಲೂಕಿನ ಕಿರವತ್ತಿ ಬಳಿಯ ಕೋಣನದಡ್ಡಿ ಬಳಿ ಹುಲಿಯನ್ನು ಕಂಡಿದ್ದೇವೆ ಎಂದು ಶಿಕ್ಷಕರೊಬ್ಬರು ಮಾಹಿತಿ ನೀಡಿದ್ದಾರೆ. ಆದರೆ ಇವುಗಳ ಖಚಿತತೆ ಕುರಿತು ಉತ್ತರಕನ್ನಡ ಜಿಲ್ಲೆಯ ಮುಂಡಗೋಡ, ಧುಂಡಸಿ ಹಾಗೂ ಯಲ್ಲಾಪುರ ವ್ಯಾಪ್ತಿಯ ಇಲಾಖಾ ಸಿಬ್ಬಂದಿಯೊಂದಿಗೆ ಮಾಹಿತಿ ವಿನಿಮಯ ನಡೆದಿದೆ.
ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡಾ ಹುಲಿಯ ಚಲನವಲನದ ಕುರಿತು ನಿಗಾ ವಹಿಸಿದ್ದಾರೆ. ಆದರೆ, ಇದುವರೆಗೆ ಯಾವುದೇ ಮಾಹಿತಿ ಬಂದಿಲ್ಲ. ಅರಣ್ಯ ಇಲಾಖೆಗೆ ಚಳ್ಳೆ ಹಣ್ಣು ತಿನಿಸುತ್ತಿರುವ ಹುಲಿಯಿಂದಾಗಿ ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗುವಂತೆ ಮಾಡಿದೆ.