ಹುಬ್ಬಳ್ಳಿ: ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬದ್ಧ ವೈರಿಗಳಂತಿದ್ದ ಬಿಜೆಪಿ ಮತ್ತು ಜೆಡಿಎಸ್ ಮತ್ತೆ ಮೈತ್ರಿಯಾಗಲು ವೇದಿಕೆ ಸಜ್ಜಾಗಿದೆ. ಬಿಜೆಪಿ ಸಭಾಪತಿ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟ ಹಿನ್ನೆಲೆ, ಪರಿಷತ್ನ ಹಿರಿಯ ನಾಯಕ ಬಸವರಾಜ ಹೊರಟ್ಟಿ ಸಭಾಪತಿ ಸ್ಥಾನ ಅಲಂಕರಿಸಲಿದ್ದಾರೆ.
ಈ ಹಿಂದೆ ಹುಬ್ಬಳ್ಳಿಯ ಮಂತ್ರಾ ರೆಸಿಡೆನ್ಸಿಯಲ್ಲಿ ನಡೆದ ಬೆಳಗಾವಿ ವಿಭಾಗದ ಕೋರ್ ಕಮಿಟಿ ಸಭೆಯಲ್ಲಿ ಬಸವರಾಜ ಹೊರಟ್ಟಿ, ಸಭಾಪತಿಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದರು. ಇದೀಗ ಅವರ ಆಸೆ ಈಡೇರುತ್ತಿದೆ. ವಿಧಾನಪರಿಷತ್ ಸಭಾಪತಿ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟು ಕೊಡಲು ನಿರ್ಧರಿಸಿರುವ ಬಿಜೆಪಿ, ಉಪ ಸಭಾಪತಿ ಸ್ಥಾನಕ್ಕೆ ಎಂ.ಕೆ. ಪ್ರಾಣೇಶ್ ಅವರನ್ನು ಕಣಕ್ಕಿಳಿಸಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಬುಧವಾರ ರಾತ್ರಿ ನಡೆದ ವಿಧಾನಪರಿಷತ್ ಸದಸ್ಯರ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಭಾಪತಿ ಸ್ಥಾನಕ್ಕೆ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರ ಹೆಸರನ್ನು ಜೆಡಿಎಸ್ ಈಗಾಗಲೇ ಅಂತಿಮಗೊಳಿಸಿದೆ. ಈ ಮೂಲಕ ಮೇಲ್ಮನೆಯಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ.
ಓದಿ: ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮತ್ತೆ ಒಂದಾದ ಜೆಡಿಎಸ್- ಬಿಜೆಪಿ: ಜೆಡಿಎಸ್‌ಗೆ ಒಲಿದ ಸಭಾಪತಿ ಸ್ಥಾನ!
ಹೊರಟ್ಟಿಯವರನ್ನು ಸಭಾಪತಿ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಅನುಮತಿ ಪಡೆದಿದ್ದಾರೆ. ಹೊರಟ್ಟಿ ವಿವರ ಪಡೆದ ಬಳಿಕ ವರಿಷ್ಠರು ಒಪ್ಪಿಗೆ ನೀಡಿದ್ದಾರೆಂದು ಬಿಜೆಪಿ ಮೂಲಗಳು ಹೇಳಿವೆ.
ಸಭೆಗೂ ಮುನ್ನ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರ ಸೂಚನೆಯ ಮೇರೆಗೆ ಹೊರಟ್ಟಿಯವರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಸಭಾಪತಿ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕು ಎಂದು ಅವರು ಮನವಿ ಮಾಡಿದ್ದರು.