ಧಾರವಾಡ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಆರಂಭವಾದ ಪರಿಣಾಮ ಭಾರತದಲ್ಲಿನ ವಿದ್ಯಾರ್ಥಿಗಳ ವೀಸಾ ಅವಧಿ ಅಂತ್ಯಗೊಂಡಿದೆ. ಹೀಗಾಗಿ ಕೃಷಿ ವಿವಿಯಲ್ಲಿರುವ ವಿದ್ಯಾರ್ಥಿಗಳಲ್ಲಿ ಆತಂಕ ಉಂಟಾಗಿದೆ.
ಧಾರವಾಡದ ಕೃವಿವಿ ಅಂತಾರಾಷ್ಟ್ರೀಯ ವಸತಿ ನಿಲಯದಲ್ಲಿ ಸುಮಾರು 15 ಆಫ್ಘನ್ ವಿದ್ಯಾರ್ಥಿಗಳಿದ್ದರು. ಆದ್ರೆ ಕೊರೊನಾ ಸಂದರ್ಭದಲ್ಲಿ 5 ಜನ ವಿದ್ಯಾರ್ಥಿಗಳು ವಾಪಸ್ ಹೋಗಿದ್ದಾರೆ. ಸದ್ಯ 10 ಜನ ಉಳಿದುಕೊಂಡಿದ್ದಾರೆ.
ಉನ್ನತ ವ್ಯಾಸಂಗಕ್ಕಾಗಿ ಬಂದಿರುವ ವಿದ್ಯಾರ್ಥಿಗಳು ತಮ್ಮ ವೀಸಾ ಅವಧಿ ವಿಸ್ತರಿಸುವಂತೆ ಭಾರತ ಸರ್ಕಾರಕ್ಕೆ ಕುಲಪತಿಗಳ ಮೂಲಕ ಕೋರಿದ್ದಾರೆ. ಭಾರತದಲ್ಲಿ ಸುರಕ್ಷಿತವಾಗಿದ್ದೇವೆ. ಇಲ್ಲೇ ಇರುತ್ತೇವೆ ಎಂದು ಕೃಷಿ ವಿವಿ ಕುಲಪತಿ ಡಾ.ಎಂ.ಬಿ ಚೆಟ್ಟಿ ಮುಂದೆ ವಿದ್ಯಾರ್ಥಿಗಳ ಅಳಲು ತೋಡಿಕೊಂಡಿದ್ದಾರೆ.
ಆಫ್ಘನ್ ವಿದ್ಯಾರ್ಥಿಗಳ ಮಾತು ಆಲಿಸಿದ ಕುಲಪತಿ ಚೆಟ್ಟಿ, ವಿದ್ಯಾರ್ಥಿಗಳ ಪರವಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ರವಾನಿಸಿದ್ದಾರೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್ಗೆ ಪತ್ರ ರವಾನೆ ಮಾಡಿದ್ದಾರೆ. ಆಫ್ಘನ್ ವಿದ್ಯಾರ್ಥಿಗಳ ವೀಸಾ ಮತ್ತು ಫೆಲೋಶಿಪ್ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಮುಂದೆ ನಮ್ಮ ದೇಶದ ಸ್ಥಿತಿ ಏನಾಗುತ್ತೋ ಗೊತ್ತಿಲ್ಲ? ಮೊದಲಿನ ತಾಲಿಬಾನಿಗಳಿಂತ ಈಗಿನ ತಾಲಿಬಾನಿಗಳು ಬದಲಾಗಿದ್ದೇವೆ ಎನ್ನುತ್ತಿದ್ದಾರೆ. ಆದರೆ ಏನು ಬದಲಾಗಿದ್ದಾರೆ ಮುಂದೆ ನೋಡಬೇಕಿದೆ. ಸದ್ಯ ನಮ್ಮ ಮನೆಯವರೆಲ್ಲ ಆರೋಗ್ಯವಾಗಿದ್ದಾರೆ. ನಿತ್ಯ ಐದಾರು ಸಲ ಫೋನ್ ಮಾಡಿ ಮನೆಯವರ ವಿಚಾರ ಕೇಳುತ್ತಿದ್ದೇವೆ ಎಂದು ವಿದ್ಯಾರ್ಥಿಗಳಾದ ಮಹಮ್ಮದ ಅಕ್ಬರ್ ಮತ್ತು ನುಸ್ರೂತ್ ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.
ಕೆಲವರ ವೀಸಾ ಈಗಾಗಲೇ ಅಂತ್ಯಗೊಂಡಿದ್ದು, ಇನ್ನುಳಿದ ಕೆಲ ವಿದ್ಯಾರ್ಥಿಗಳ ವೀಸಾ ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಮುಕ್ತಾಯವಾಗಲಿದೆ. ಉಳಿದ ಕೆಲ ವಿದ್ಯಾರ್ಥಿಗಳ ವೀಸಾ 2022 ರ ಜನವರಿ, ಫೆಬ್ರವರಿಯಲ್ಲಿ ಅಂತ್ಯಗೊಳ್ಳಲಿದೆ.