ಹುಬ್ಬಳ್ಳಿ: ತನ್ನ ಪರಿಚಯಸ್ಥ ಹುಡುಗಿಯೊಂದಿಗೆ ಸಲುಗೆಯಿಂದ ಇದ್ದ ಎಂಬ ಕಾರಣಕ್ಕೆ ಯುವಕನನ್ನು, ಮತ್ತೊಬ್ಬ ಯುವಕ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಜಿಲ್ಲೆಯ ಕಲಘಟಗಿ ತಾಲೂಕಿನ ಕುರುವಿನಕೊಪ್ಪ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಗ್ರಾಮದ ಮಂಜುನಾಥ ಶಂಕ್ರಪ್ಪ ಮರೆಪ್ಪನವರ್ ಕೊಲೆಯಾದ ಯುವಕ. ಅದೇ ಗ್ರಾಮದ ಬಸವರಾಜ ಲಕ್ಷ್ಮಣ ಕುರಡಿಕೇರಿ ಅಲಿಯಾಸ್ ಸಿಂಧೂರ್ ಕೊಲೆಗೈದ ಆರೋಪಿ. ಕೊಲೆಯಾದ ಮಂಜುನಾಥ್ ಗ್ರಾಮದ ಯುವತಿಯೊಬ್ಬಳ ಜೊತೆ ಸಲುಗೆಯಿಂದ ವರ್ತಿಸುತ್ತಿದ್ದ. ಆ ಹುಡುಗಿಯ ಪರಿಚಯಸ್ಥನಾಗಿದ್ದ ಬಸವರಾಜನಿಗೆ ಇದು ಸಿಟ್ಟು ತರಿಸಿತ್ತು. ಈ ಹಿಂದೆ ಯುವತಿ ಜೊತೆ ಮಾತನಾಡದಂತೆ ಎಚ್ಚರಿಕೆಯನ್ನು ನೀಡಿದ್ದ ಎನ್ನಲಾಗ್ತಿದೆ.
ಇದು ಮುಂದುವರಿದು, ಒಮ್ಮೆ ಇದೇ ವಿಷಯವಾಗಿ ಹಿರಿಯರ ಸಮ್ಮುಖದಲ್ಲಿ ನ್ಯಾಯ ಪಂಚಾಯಿತಿ ಕೂಡ ನಡೆದಿತ್ತು. ಆದರೂ ಮಂಜುನಾಥ್ ಆ ಯುವತಿಯ ಸ್ನೇಹ ಬಿಟ್ಟಿರಲಿಲ್ಲ. ಇದರಿಂದ ಕೆರಳಿದ ಬಸವರಾಜನು, ಮಂಜುನಾಥನನ್ನು ಕೊಲೆ ಮಾಡಬೇಕೆಂದು ತೀರ್ಮಾನಿಸಿ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಮಚ್ಚು ಮುರಿದುಹೋದ ಕಾರಣ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ.
ಇದರಿಂದ ಗಂಭೀರ ಗಾಯಗೊಂಡ ಮಂಜುನಾಥನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತೀವ್ರ ರಕ್ತಸ್ರಾವದಿಂದ ಯುವಕ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಆರೋಪಿ ಬಸವರಾಜನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಗಂಡ-ಹೆಂಡ್ತಿ, ಇಬ್ಬರು ಮಕ್ಕಳ ಮೃತದೇಹ ಪತ್ತೆ.. ಕೊಲೆಗೈದು ಆತ್ಮಹತ್ಯೆಗೆ ಶರಣಾದ ಶಂಕೆ