ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಹಂದಿಗಳ ಕಾಟ ವಿಪರೀತವಾಗಿದ್ದು, ಇದರಿಂದ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ರೈತರು ಬೇಸತ್ತು ಹೋಗಿದ್ದಾರೆ.
ಮಾಲಿಕರು ಹಂದಿಗಳನ್ನು ಹುಬ್ಬಳ್ಳಿಯಿಂದ ಹಳ್ಳಿಗಳಿಗೆ ತಂದು ಬಿಡುತ್ತಿದ್ದು ಇದರಿಂದ ರೈತರು ಹಾಗೂ ಗ್ರಾಮಸ್ಥರು ದಿನವಿಡಿ ಹಂದಿಗಳನ್ನು ಕಾಯುವದರಲ್ಲೇ ಕಾಲ ಕಳೆಯುವ ಪ್ರಸಂಗ ಬಂದಿದೆ.
ಇನ್ನೂ ಹಿಂದೆ ರೈತರು ಬೆಳೆದ ಬೆಳೆಗಳನ್ನು ನಾಶ ಮಾಡಿದ್ದವು, ಅದೆಷ್ಟೋ ಬಾರಿ ರೈತರು ಹಾಗೂ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಸಹ ಪ್ರಯೋಜನವಾಗಿಲ್ಲ.
ಈಗ ಮುಂಗಾರು ಬಿತ್ತನೆಗೆ ಸಿದ್ಧತೆ ನಡೆಸಿದ ರೈತರಿಗೆ ಮತ್ತೇ ಗುಂಪು ಗುಂಪಾಗಿ ಹಂದಿಗಳು ಆಗಮಿಸಿ ಹೊಲದಲ್ಲಿ ಬಿತ್ತಿರುವ ಹತ್ತಿ ಹಾಗೂ ಹೆಸರನ್ನು ತಿಂದು ಹಾಳು ಮಾಡುತ್ತಿದ್ದು, ಅಲ್ಲದೇ ಗ್ರಾಮದಲ್ಲಿ ಹಂದಿಗಳು ದಾಂಗುಡಿಯಿಟ್ಟು ಗಲೀಜು ಮಾಡುತ್ತಿದ್ದಾವೆ.
ಕೊರೊನಾ ನಡುವೆಯೂ ಇನ್ನಿತರ ರೋಗ ಹರಡುವ ಭಿತ್ತಿ ಎದುರಾಗಿದೆ. ಕೂಡಲೇ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಂದಿಗಳ ಕಾಟಕ್ಕೆ ನಿಯಂತ್ರಣ ಹಾಕಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.