ಧಾರವಾಡ: ಜಿಲ್ಲೆಯಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮಾ. 17 ರಿಂದ 21 ರವರೆಗೆ ವಿವಿಧ ತಾಲೂಕುಗಳ ವ್ಯಾಪ್ತಿಯಲ್ಲಿ ಮದ್ಯಪಾನ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ನಿತೀಶ್ ಪಾಟೀಲ ಆದೇಶ ಹೊರಡಿಸಿದ್ದಾರೆ.
ಮಾರ್ಚ್ 17 ರಿಂದ 20 ರವರೆಗೆ ಧಾರವಾಡ ಗ್ರಾಮೀಣ ತಾಲೂಕು, ಹುಬ್ಬಳ್ಳಿ ಗ್ರಾಮೀಣ ತಾಲೂಕು, ನವಲಗುಂದ ತಾಲೂಕು, ಅಣ್ಣಿಗೇರಿ ತಾಲೂಕು, ಅಳ್ನಾವರ ತಾಲೂಕಿನ ಹುಲ್ಲಿಕೇರಿ, ಅರವಟಗಿ, ಕೋಗಿಲಗೇರಿ, ಡೋರಿ, ಬೆಣಚಿ, ಹೊನ್ನಾಪೂರ, ಕುಂಬಾರಗೊಪ್ಪ, ಕಂಬಾರಗಣವಿ, ಕಡಬಗಟ್ಟಿ, ಅಂಬೋಳಿ, ಚಂದ್ರಗಿರಿ ಜೈಭಾರತ ಕಾಲೋನಿ ಹಾಗೂ ಕಲಘಟಗಿ ತಾಲೂಕುಗಳಲ್ಲಿ ಮದ್ಯಪಾನ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.
ಮಾರ್ಚ್ 15 ರಿಂದ 18 ರವರೆಗೆ ನವಲಗುಂದ ಪಟ್ಟಣ (ರಾಮಲಿಂಗ ಕಾಮಣ್ಣ), ಕಲಘಟಗಿ ತಾಲೂಕಿನ ಗ್ರಾಮಗಳಾದ ಜಿ.ಬಸವನಕೊಪ್ಪ, ಜೋಡಳ್ಳಿ, ಹಿರೇಹೊನ್ನಳ್ಳಿ, ಧೂಳಿಕೊಪ್ಪ ಸಂಗಮೇಶ್ವರ, ದುಮ್ಮವಾಡ, ಕುಂದಗೋಳ ತಾಲೂಕಿನ ಗ್ರಾಮಗಳಾದ ಯರೇಬೂದಿಹಾಳ, ರಟ್ಟಿಗೇರಿ, ಹನುಮನಾಳ, ರಾಮಾಪೂರ, ಧಾರವಾಡ ತಾಲೂಕಿನ ಮುಳಮುತ್ತಲ ಗ್ರಾಮಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.
ಮಾರ್ಚ್ 16 ರಿಂದ 19 ರವರೆಗೆ ಕುಂದುಗೋಳ ತಾಲೂಕು, ಅಳ್ನಾವರ ತಾಲೂಕು, ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಗ್ರಾಮಗಳಾದ ಸುಳ್ಳ ಮತ್ತು ಕಿರೇಸೂರು ಗ್ರಾಮಗಳಲ್ಲಿ ಮತ್ತು ಮಾರ್ಚ್ 19 ರಿಂದ 22 ರವರೆಗೆ ಕಲಘಟಗಿ ತಾಲೂಕಿನ ಮಿಶ್ರೀಕೋಟಿ ಗ್ರಾಮದಲ್ಲಿ ಮದ್ಯಪಾನ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಈ ಸ್ಥಳಗಳಲ್ಲಿ ಭಾರತೀಯ ತಯಾರಿಕೆಯ ಮದ್ಯದ ಅಂಗಡಿಗಳು, ಬಾರ್ ಗಳು, ಕ್ಲಬ್‍ಗಳು ಮತ್ತು ಮದ್ಯದ ಡಿಪೋಗಳನ್ನು ಮುಚ್ಚತಕ್ಕದ್ದು, ಪರಿಸ್ಥಿತಿ ಅನುಗುಣವಾಗಿ ಅಬಕಾರಿ ಇನ್ಸಪೆಕ್ಟರರು ಹಾಗೂ ಉಪವಿಭಾಗ ಅಬಕಾರಿ ಅಧೀಕ್ಷಕರು, ಅವಶ್ಯಕತೆ ಕಂಡುಬಂದಲ್ಲಿ ಶಾಂತಿ ಪಾಲನೆಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಓದಿ : 'ದಿ ಕಾಶ್ಮೀರಿ ಫೈಲ್ಸ್' ಸಿನಿಮಾ ನೋಡದವರನ್ನು ಜೈಲಿಗಟ್ಟುವ ಕಾನೂನು ತನ್ನಿ: ಯಶವಂತ್ ಸಿನ್ಹಾ ವ್ಯಂಗ್ಯ