ಹುಬ್ಬಳ್ಳಿ/ಧಾರವಾಡ : ಹೊಸ ವರ್ಷಕ್ಕೆ ಕ್ಷಣಗಣನೆ ಶುರುವಾಗಿದೆ. ನೂತನ ವರ್ಷ ಸ್ವಾಗತಿಸುವ ಜನರು ಜಿಲ್ಲೆಯ ಕೆಲ ಘಟನೆಗಳನ್ನು ಮರೆಯುವಂತಿಲ್ಲ. ಅಂತಹ ಕೆಲವು ಘಟನಾವಳಿಗಳನ್ನು ಮೆಲುಕು ಹಾಕೋಣ.

ದೇಶದ ಗಮನ ಸೆಳೆದಿದ್ದ ಅಪಘಾತ
ಜನವರಿ 15ರಂದು ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯ ಇಟಿಗಟ್ಟಿ ಬಳಿ ಟೆಂಪೊ ಟ್ರಾವೆಲರ್ ಮತ್ತು ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿತ್ತು. ಘಟನೆಯಲ್ಲಿ 12 ಜನ ಸ್ಥಳದಲ್ಲೇ ಅಸುನೀಗಿದ್ದರು. ಸಂಕ್ರಮಣ ದಿನದಂದು ನಡೆದ ಭೀಕರ ರಸ್ತೆ ಅಪಘಾತ ಇಡೀ ದೇಶದ ಗಮನ ಸೆಳೆದಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದರು.
ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜಾಮೀನು
ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಧಾರವಾಡ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿ ಸುಪ್ರೀಂಕೋರ್ಟ್ ಜಾಮೀನು ನೀಡಿತ್ತು. ಇದು 2021ರಲ್ಲಿ ನಡೆದ ಘಟನೆಗಳಲ್ಲಿ ಪ್ರಮುಖವಾಗಿದೆ. ಇದೆಲ್ಲರ ಮಧ್ಯೆ ಕೊರೊನಾ ಹಾವಳಿ, ನೆರೆ ಪ್ರವಾಹದಂತದ ಕೆಲ ಘಟನೆಗಳು ಜನರ ಮನಸ್ಸಿನಲ್ಲಿ ಉಳಿದಿವೆ.

ಚೆನ್ನಮ್ಮ ಸರ್ಕಲ್ ಫ್ಲೈಓವರ್ ಉದ್ಘಾಟನೆ
ವಾಣಿಜ್ಯನಗರಿ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಂದ ಜನವರಿಯಲ್ಲಿ ವರ್ಚುವಲ್ ಆಗಿ ಚಾಲನೆ ನೀಡಲಾಗಿದೆ.
ಬಿಆರ್‌ಟಿಎಸ್‌ಗೆ ಸ್ಕೊಚ್ ಸಂಸ್ಥೆಯ ರಾಷ್ಟ್ರೀಯ ಮಟ್ಟದ ಸ್ವರ್ಣ ಪ್ರಶಸ್ತಿ, ಚೆನ್ನಮ್ಮ ವೃತ್ತದಲ್ಲಿ ಹಳೇ ಬಸ್ ನಿಲ್ದಾಣ ಕೆಡವಿ ಹೊಸ ನಿಲ್ದಾಣಕ್ಕೆ ಚಾಲನೆ ನೀಡಲಾಗಿದೆ. ನಗರದ ವಿಮಾನ ನಿಲ್ದಾಣದಲ್ಲಿ ಕಾರ್ಗೊ ಸೇವೆ ಆರಂಭವಾಗಿದೆ.

ರೈಲು ನಿಲ್ದಾಣಕ್ಕೆ ಸಿದ್ದಾರೂಢ ಶ್ರೀಗಳ ಹೆಸರು ನಾಮಕರಣ
ಇನ್ನೂ ವಿಶೇಷ ಅಂದರೆ ನಗರದ ರೈಲು ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ ಎಂದು ನಾಮಕರಣ. ಪಾಲಿಕೆಯಲ್ಲಿ ಹೊಸ ಪರ್ವ ಶುರುವಾಗಿದ್ದು, ಎರಡೂವರೆ ವರ್ಷಗಳ ನಂತರ ಮಹಾನಗರ ಪಾಲಿಕೆಗೆ ಸೆಪ್ಟೆಂಬರ್‌ನಲ್ಲಿ ಚುನಾವಣೆ ನಡೆಯಿತು.
ಮರು ವಿಂಗಡಣೆಯಾದ 82 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 39, ಕಾಂಗ್ರೆಸ್ 33, ಜೆಡಿಎಸ್ 1, ಎಐಎಂಐಎಂ 3 ಸ್ಥಾನ ಪಡೆದರೆ, ಪಕ್ಷೇತರರು 6 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದರು.
ಜನರನ್ನು ಬೆಚ್ಚಿಬೀಳಿಸಿ ಅಪರಾಧ ಕೃತ್ಯಗಳು
ಹೆಬಸೂರಿನ ಮಲಪ್ರಭಾ ಕಾಲುವೆ ಬಳಿ ಜನವರಿಯಲ್ಲಿ ಫೋಟೋಶೂಟ್ ಮಾಡುತ್ತಿದ್ದ ಐವರ ಮೇಲೆ ಹೆಜ್ಜೇನು ದಾಳಿ ನಡೆಸಿದ್ದರಿಂದ, ತಪ್ಪಿಸಿಕೊಳ್ಳುವ ಭರದಲ್ಲಿ ನೀರಿಗೆ ಬಿದ್ದು ಮೂವರು ಸಾವನ್ನಪ್ಪಿದರು. ರಾಕೇಶ್ ಕಾಟವೆ ಎಂಬ ಯುವಕನನ್ನು ಕೊಲೆ ಮಾಡಿ ರುಂಡ– ಮುಂಡವನ್ನು ಬೇರ್ಪಡಿಸಲಾಗಿತ್ತು.
ಮತಾಂತರ ಯತ್ನ ಗಲಾಟೆ
ಮತಾಂತರಕ್ಕೆ ಯತ್ನ ಆರೋಪ ಖಂಡಿಸಿ ನವನಗರ ಪೊಲೀಸ್ ಠಾಣೆಗೆ ಹಿಂದೂಪರ ಸಂಘಟನೆಗಳಿಂದ ಮುತ್ತಿಗೆ. ಪ್ರತಿಯಾಗಿ ಕ್ರೈಸ್ತರಿಂದ ಪ್ರತಿಭಟನೆ. ಡಿಸಿಪಿ ನಿಂದಿಸಿದ್ದಕ್ಕಾಗಿ 100 ಮಂದಿ ವಿರುದ್ಧ ಪ್ರಕರಣ ದಾಖಲು. ಘಟನೆ ಬಳಿಕ ಡಿಸಿಪಿ ರಾಮರಾಜನ್ ವರ್ಗಾವಣೆ ಮಾಡಲಾಗಿತ್ತು.

ಕಾನೂನು ವಿದ್ಯಾರ್ಥಿಗಳ ಅಹೋರಾತ್ರಿ ಪ್ರತಿಭಟನೆ
2021ರಲ್ಲಿ ಶೈಕ್ಷಣಿಕ ವರ್ಷದಲ್ಲಿ ಸಾಕಷ್ಟು ತೊಡಕುಗಳು ಎದುರಾಗಿವೆ. ಪರೀಕ್ಷೆ ವಿರೋಧಿಸಿ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಒಂದು ವಾರ ಪ್ರತಿಭಟನೆ ನಡೆಯಿತು.
ಅಂತಿಮವಾಗಿ ಪರೀಕ್ಷಾ ವೇಳಾಪಟ್ಟಿ ಅನೂರ್ಜಿತಗೊಳಿಸಿದ ಹೈಕೋರ್ಟ್, ಆಂತರಿಕ ಮೌಲ್ಯಮಾಪನ ಮಾಡಿ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗಳಿಗೆ ಬಡ್ತಿ ನೀಡಲು ಆದೇಶ ಮಾಡಲಾಯಿತು.

ಹುಬ್ಬಳ್ಳಿ ನಾಯಕನಿಗೆ ಒಲಿದ ಸಿಎಂ ಪಟ್ಟ
ಬಸವರಾಜ ಬೊಮ್ಮಾಯಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಅದರ ಜೊತೆ ಬಸವರಾಜ ಹೊರಟ್ಟಿ ಸಭಾಪತಿಯಾಗಿದ್ದು, ಬಿಎಸ್‌ವೈ ಸಂಪುಟದಲ್ಲಿ ಸಚಿವರಾಗಿದ್ದ ಇಲ್ಲಿನ ಶಾಸಕ ಜಗದೀಶ ಶೆಟ್ಟರ್, ಬೊಮ್ಮಾಯಿ ಸಂಪುಟ ಸೇರದೆ ದೂರ ಉಳಿದಿದ್ದಾರೆ.
ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಹುಬ್ಬಳ್ಳಿಯ ಶ್ರೀನಿವಾಸ ಮಾನೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದರು. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಡಿಸೆಂಬರ್ ಅಂತ್ಯದಲ್ಲಿ ಎರಡು ದಿನ ನಡೆಯಿತು.

ಕೋವಿಡ್ಗೆ ಸಂಜೀವಿನಿಯಾದ ಕಿಮ್ಸ್
ವೈದ್ಯಕೀಯ ಕ್ಷೇತ್ರದಲ್ಲಿ ಕೋವಿಡ್ ನಿಯಂತ್ರಣ ಹಾಗೂ ಆರೈಕೆ ವಿಚಾರದಲ್ಲಿ ಕಿಮ್ಸ್ ಸೇವೆ ಅಪಾರವಾಗಿದೆ. ಧಾರವಾಡ ಜಿಲ್ಲೆಯಷ್ಟೇ ಅಲ್ಲದೆ, ಉತ್ತರ ಕರ್ನಾಟಕ ಭಾಗದ ಕ್ಲಿಷ್ಟಕರವಾದ ರೋಗಿಗಳ ಜೀವ ಉಳಿಸುವಲ್ಲಿ ಕಿಮ್ಸ್ ಆಸ್ಪತ್ರೆ ಸಂಜೀವಿನಿಯಾಯಿತು.
ವೆಂಟಿಲೇಟರ್ ಸಹಿತ ಹಾಸಿಗೆಗಳು, ಒಂದೂವರೆ ಸಾವಿರಕ್ಕೂ ಹೆಚ್ಚು ಕೋವಿಡ್ ಬೆಡ್‌ಗಳು, 100 ಹಾಸಿಗೆ ಸಾಮರ್ಥ್ಯದ ತಾತ್ಕಾಲಿಕ ಆರೈಕೆ ಕೇಂದ್ರ, ಮಕ್ಕಳ ಕೋವಿಡ್ ಆರೈಕೆ ಕೇಂದ್ರ, ಕಪ್ಪು ಶಿಲೀಂಧ್ರಕ್ಕೆ ಚಿಕಿತ್ಸೆ ಹಾಗೂ ದಾಖಲೆ ಪ್ರಮಾಣದಲ್ಲಿ ಕೋವಿಡ್ ಲಸಿಕೆ ಅಭಿಯಾನದ ಮೈಲುಗಲ್ಲುಗಳಿಗೆ ಕಿಮ್ಸ್ ಸಾಕ್ಷಿಯಾಯಿತು.
ಇದನ್ನೂ ಓದಿ: ಬಾಸಿಸಂ ಬಿಟ್ಟು ಜನರ ಕೆಲಸ ಮಾಡಿ: ಜಿಲ್ಲಾಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಪಾಠ ಹೀಗಿತ್ತು..