ಹುಬ್ಬಳ್ಳಿ : ಲಾಕ್‌ಡೌನ್ ನಂತರ ದಿನ ಕಳೆದಂತೆ ಬಸ್ನಲ್ಲಿ ಪ್ರಯಾಣಿಸುವರ ಸಂಖ್ಯೆಯಲ್ಲಿ ಚೇತರಿಕೆ ಕಂಡು ಬಂದಿದೆ. ಈ ಹಿನ್ನೆಲೆ ಕಳೆದ 9 ತಿಂಗಳಿಂದ ಸ್ಥಗಿತಗೊಂಡಿದ್ದ ಪಿಂಪ್ರಿ, ಹೈದರಾಬಾದ್, ಸೊಲ್ಲಾಪುರ, ಮಂಗಳೂರು ಮತ್ತು ಬೆಂಗಳೂರಿಗೆ ಮತ್ತಷ್ಟು ಸ್ಲೀಪರ್, ವೋಲ್ವೋ ಮತ್ತು ರಾಜಹಂಸ ಬಸ್ಗಳ ಸಂಚಾರವನ್ನು ಕೆಎಸ್ಆರ್‌ಟಿಸಿ ಪುನಾರಂಭಿಸಿದೆ.
ಈ ಬಸ್ಗಳು ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಿಂದ ಹೊರಡುತ್ತವೆ ಎಂದು ವಾಕರಸಾಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್ ರಾಮನಗೌಡರ ತಿಳಿಸಿದ್ದಾರೆ.
ಮುಂಗಡ ಬುಕ್ಕಿಂಗ್ಗೆ ಅವಕಾಶ : ಈ ಬಸ್ಗಳಿಗೆ ಆನ್ಲೈನ್ ಮತ್ತು ಮುಂಗಡ ಬುಕ್ಕಿಂಗ್ ಕೌಂಟರ್ಗಳ ಮೂಲಕ ಮುಂಚಿತವಾಗಿ ಆಸನಗಳನ್ನು ಕಾಯ್ದಿರಿಸುವ ಅವಕಾಶ ಕಲ್ಪಿಸಲಾಗಿದೆ. 4 ಅಥವಾ 4ಕ್ಕಿಂತ ಹೆಚ್ಚು ಆಸನಗಳಿಗೆ ಒಂದೇ ಟಿಕೆಟ್ ಪಡೆದುಕೊಂಡ್ರೆ ಮೂಲ ಪ್ರಯಾಣದರದಲ್ಲಿ ಶೇ.5ರಷ್ಟು ರಿಯಾಯಿತಿ ನೀಡಲಾಗುತ್ತದೆ.
ಹೋಗುವುದು ಮತ್ತು ವಾಪಸ್ ಬರುವ ಕುರಿತು ಒಮ್ಮೆಗೆ ಟಿಕೆಟ್ ಪಡೆದ್ರೆ ಬರುವಾಗಿನ ಪ್ರಯಾಣಕ್ಕೆ ಮೂಲ ಪ್ರಯಾಣ ದರದಲ್ಲಿ ಶೇ.10ರಷ್ಟು ರಿಯಾಯಿತಿ ಸಿಗುತ್ತದೆ. ಲಾಕ್‌ಡೌನ್ ಪೂರ್ವದಲ್ಲಿ ಹುಬ್ಬಳ್ಳಿಯಿಂದ ನೆರೆಯ ರಾಜ್ಯಗಳಿಗೆ ವೋಲ್ವೋ, ಸ್ಲೀಪರ್, ರಾಜಹಂಸ, ವೇಗದೂತ ಸೇರಿ ಒಟ್ಟು 65 ಬಸ್ ಸಂಚರಿಸುತ್ತಿದ್ದವು.
ಲಾಕ್‌ಡೌನ್ ನಂತರದಲ್ಲಿ ಹಂತ ಹಂತವಾಗಿ 53 ಬಸ್ಗಳ ಸಂಚಾರವನ್ನು ಮರು ಪ್ರಾರಂಭಿಸಲಾಗಿತ್ತು. ಈಗ ಮತ್ತೆ ಹತ್ತು ಬಸ್ಗಳನ್ನು ಪುನಾರಂಭಿಸಲಾಗಿದೆ.