ದಾವಣಗೆರೆ: ಧರ್ಮಕ್ಕೋಸ್ಕರ ನಾವಿಲ್ಲ, ಧರ್ಮ ನಮಗೋಸ್ಕರ ಇದೆ. ಯಾವ ಧರ್ಮದಲ್ಲಿ ಮಾನವೀಯತೆ, ಮನುಷ್ಯತ್ವ ಇರುವುದಿಲ್ಲವೋ ಅದು ಧರ್ಮವೇ ಅಲ್ಲ. ಯಾವ ಧರ್ಮದಲ್ಲಿ ಮಾನವೀಯತೆ, ಮನುಷ್ಯತ್ವ ಇರುತ್ತದೋ ಅದೇ ಶ್ರೇಷ್ಠ ಧರ್ಮ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾನವೀಯತೆಯ ಪಾಠ ಮಾಡಿದ್ರು.
ನಗರದಲ್ಲಿರುವ ಶಿವಯೋಗಿ ಆಶ್ರಮದಲ್ಲಿ ನಡದ ಶರಣಸಂಸ್ಕೃತಿ ಉತ್ಸವದಲ್ಲಿ ಭಾಗಿಯಾಗಿ ಜಯದೇವ ಶ್ರೀ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಮೇಲು-ಕೀಳು, ಅಸ್ಪೃಶ್ಯತೆ ಆಚರಣೆ ಹೋಗಲಾಡಿಸುವ ಕೆಲಸವನ್ನು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮಾಡುತ್ತಿದ್ದಾರೆ. ಸಿಖ್ಖರು, ಕ್ರಿಶ್ಚಿಯನ್, ಮುಸ್ಲಿಮರು, ಹಿಂದೂಗಳೆಂದ್ರೆ ಮನುಷ್ಯರಲ್ವಾ?. ಒಬ್ಬ ವ್ಯಕ್ತಿಯ ಚಿಕಿತ್ಸೆಗೆ ಇದು ಮುಸ್ಲಿಂ ರಕ್ತ, ಕ್ರಿಶ್ಚಿಯನ್ ರಕ್ತ, ಹಿಂದೂ ರಕ್ತ ಅಂತಾ ಬೇಡ ಎನ್ನುತ್ತೇವಾ? ಎಂದು ಪ್ರಶ್ನಿಸಿದರು.
ಇಂದಿಗೂ ಇವನಾರವ, ಇವನಾರವ ಎಂಬ ಜಾತಿ ವ್ಯವಸ್ಥೆ ಇದೆ. ಇವ ನಮ್ಮವ ಎಂಬ ವ್ಯವಸ್ಥೆ ಬರಬೇಕು. ಸಮಾಜದಲ್ಲಿ ಅಸಮಾನತೆ ಇರುವುದರಿಂದ ಆರ್ಥಿಕ ಅಸಮಾನತೆ ಬಂತು. ವರ್ಣ ವ್ಯವಸ್ಥೆಯಿಂದ ಶ್ರೇಣಿಕೃತ ಸಮಾಜ ನಿರ್ಮಾಣಗೊಂಡಿತ್ತು. ಬಹುಸಂಖ್ಯಾತ ಸಮುದಾಯವನ್ನು ಅಕ್ಷರ ಸಂಸ್ಕೃತಿಯಿಂದ ದೂರವಿಟ್ಟಿದ್ದರು. ನಮ್ಮ ಜಾತಿ ವ್ಯವಸ್ಥೆ ಬಗ್ಗೆ ಲೋಹಿಯಾ, ಬುದ್ಧ, ಅಂಬೇಡ್ಕರ್ ಹೋರಾಟ ಮಾಡಿದ್ದರು. ಸಾಮಾಜಿಕ ವ್ಯವಸ್ಥೆ ಜಡತ್ವ ಇದ್ದಾಗ ಸಮಾನತೆ ಬರುವುದಿಲ್ಲ, ಬುದ್ಧ ಸಮಾನತೆ ಬೋಧಿಸಿದರು ಎಂದರು. ಇದಕ್ಕೂ ಮುನ್ನ ಜಯದೇವ ಪ್ರಶಸ್ತಿ ಪಡೆದ ಬಳಿಕ ಪ್ರಶಸ್ತಿಯೊಂದಿಗೆ ನೀಡಿದ್ದ 50 ಸಾವಿರ ರೂಪಾಯಿ ಹಣವನ್ನು ವಾಪಸ್ ಬಡ ಮಕ್ಕಳ ಕಲಿಕೆಗೆ ಸಿದ್ದರಾಮಯ್ಯ ನೀಡಿದ್ರು.
ಇದನ್ನೂ ಓದಿ: ಬಂಟ್ವಾಳ: ಗುಡ್ಡ ಜರಿದು ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ