ದಾವಣಗೆರೆ : ಮನೆ ಬೀಗ ಮುರಿದು ಖತರ್ನಾಕ್ ಕಳ್ಳರು ಇಡೀ ಮನೆಯನ್ನು ಗುಡಿಸಿ ಗುಂಡಾಂತರ ಮಾಡಿರುವ ಘಟನೆ ಕೆಟಿಜೆನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಿಟ್ಟುವಳ್ಳಿ ಲೆನಿನ್ ನಗರದಲ್ಲಿ ನಡೆದಿದೆ. ಮನೆಯಲ್ಲಿದ್ದ 3.76 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು ಪರಾರಿಯಾಗಿದ್ದಾರೆ. ಎರಡ್ಮೂರು ದಿನಗಳ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.
ಮನೆಯಲ್ಲಿ ಯಾರು ಇಲ್ಲದ ವೇಳೆ ಖದೀಮರು ಈ ಕೃತ್ಯ ಎಸಗಿದ್ದು, ದಾವಣಗೆರೆ ನಗರದ ನಿಟ್ಟುವಳ್ಳಿಯ ಲೆನಿನ್ ನಗರ ನಿವಾಸಿಯಾದ ರೇಣುಕಮ್ಮ(46) ಅವರಿಗೆ ಸೇರಿದ ಚಿನ್ನಾಭರಣ ಕಳ್ಳತನವಾಗಿದೆ. ಮನೆ ಮಾಲೀಕರಾದ ರೇಣುಕಮ್ಮ ಅವರು ತಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸ ಮಾಡುತ್ತಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಮಕ್ಕಳೊಂದಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ.
ಸಾಗರದಿಂದ ದಾವಣಗೆರೆಗೆ ಮರಳಿ ಮನೆಗೆ ಬಂದು ನೋಡಿದರೆ ಮನೆ ಬಾಗಿಲಿಗೆ ಹಾಕಿದ್ದ ಬೀಗ ಮುರಿಯಲಾಗಿತ್ತು. ಇನ್ನು ಮನೆ ಒಳಗೆ ತೆರಳಿ ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಬೀರುವಿನಲ್ಲಿದ್ದ 121 ಗ್ರಾಂ ತೂಕದ ಬಂಗಾರ ಹಾಗೂ 440 ಗ್ರಾಂ ತೂಕದ ಬೆಳ್ಳಿ ಆಭರಣ ಸೇರಿ ಒಟ್ಟು 3.76 ಲಕ್ಷ ಮೌಲ್ಯದ ಆಭರಣವನ್ನು ದೋಚಿ ಕಳ್ಳರು ಕಾಲು ಕಿತ್ತಿದ್ದಾರೆ. ಇನ್ನು ರೇಣುಕಮ್ಮ ಕೆಟಿಜೆನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ಪೊಲೀಸರು ಕಳ್ಳನನ್ನು ಬಂಧಿಸಲು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಮದುವೆ ಕಾರ್ಡ್ ಹಂಚಲು ತೆರಳಿದ್ದ ವಧು ಕಿಡ್ನ್ಯಾಪ್, ಸಾಮೂಹಿಕ ಅತ್ಯಾಚಾರ.. 20 ದಿನದ ಬಳಿಕ ಪೋಷಕರ ಮಡಿಲು ಸೇರಿದ ಸಂತ್ರಸ್ತೆ!