ದಾವಣಗೆರೆ: ದಾವಣಗೆರೆಯಲ್ಲಿ ಲೋಕಸಭೆ ಚುನಾವಣೆ ರಂಗು ಪಡೆದಿದ್ದು, ಕೊನೆಗಳಿಗೆಯಲ್ಲಿ ಪಂಚಮಸಾಲಿ ಸಮಾಜ ಟ್ವಿಸ್ಟ್ ಕೊಟ್ಟಿದೆ.
ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ಮತಗಳಿರುವ ಪಂಚಮಸಾಲಿ ಸಮಾಜ ಬಿಜೆಪಿಗೆ ಶಾಕ್ ನೀಡುತ್ತಾ ಎಂಬ ಚರ್ಚೆ ಹುಟ್ಟು ಹಾಕಿದೆ. ಹೌದು, ದಾವಣಗೆರೆಯಲ್ಲಿ ಕಳೆದ 10 ವರ್ಷಗಳಿಂದ ತಾನು ಬಿಜೆಪಿಗೆ ದುಡಿದಿದ್ದೇನೆ. ಆದರೆ ಇದುವರೆಗೂ ಗುರುತಿಸುವ ಕೆಲಸ ಆಗಿಲ್ಲ, 2009ರಲ್ಲಿ ನನ್ನನ್ನು ಪಕ್ಷಕ್ಕೆ ಕರೆತಂದಿದ್ದ ಬಿಜೆಪಿ ನಾಯಕರು ಮಾತು ತಪ್ಪಿದ್ದಾರೆ ಎಂಬುದು ಮಾಜಿ ಸಚಿವ, ದಿವಂಗತ ಹೆಚ್ ಶಿವಪ್ಪ ಅವರ ಮಗ ಹೆಚ್.ಎಸ್ ನಾಗರಾಜ್ ಅವರ ಅಳಲು.
ಕಳೆದ ವಿಧಾನಸೌಧ ಚುನಾವಣೆಯಲ್ಲಿ ಕೂಡ ನಾಗರಾಜ್ಗೆ ಟಿಕೆಟ್ ನೀಡಿರಲಿಲ್ಲ. ಈ ಬಾರಿಯ ಎಂಪಿ ಚುನಾವಣೆಯಲ್ಲಿ ನನ್ನ ಮತ್ತು ನಮ್ಮ ಸಮಾಜವನ್ನು ಬಿಜೆಪಿ ಕಡೆಗಣನೆ ಮಾಡಿದೆ ಎಂಬುದು ನಾಗರಾಜ್ ಅವರ ನೋವಾಗಿದೆ.
ವೇದಿಕೆಯಲ್ಲೇ ಕಣ್ಣೀರಿಟ್ಟ ನಾಗರಾಜ್:
2009ರ ಫೆಬ್ರುವರಿಯಲ್ಲಿ ನನ್ನನ್ನು ಬಿಜೆಪಿ ಪಕ್ಷ ಸೇರಿಸಿಕೊಂಡಿತ್ತು, ಅಂದಿನಿಂದ ಇಂದಿನವರೆಗೆ ದುಡಿದ್ದೇನೆ. ಆದರೆ ಇದುವರೆಗೂ ಗುರುತಿಸುವ ಕೆಲಸ ಆಗಿಲ್ಲ, ಅಧಿಕಾರಕ್ಕಾಗಿ ಆಸೆ ಪಟ್ಟವನು ನಾನಲ್ಲ, ಆದರೆ ನಮ್ಮನ್ನು ಬಿಜೆಪಿ ಬಳಕೆ ಮಾಡಿಕೊಂಡಿದೆ. ಅಂದು ನಮ್ಮ ಅಪ್ಪ ಅನಾರೋಗ್ಯದಲ್ಲಿದ್ದಾಗ ನಿನ್ನ ನಂಬಿ ಬಂದಿದ್ದಾರೆ, ರಾಜಕಾರಣದಲ್ಲಿ ನಂಬಿಕೆ ಮುಖ್ಯ ಎಂದು ಹೇಳಿದ್ದರು. ಆದರೆ ಬಿಜೆಪಿಯವರು ಈ ಮಾತನ್ನು ಉಳಿಸಿಕೊಳ್ಳಲಿಲ್ಲ ಎಂದು ವೇದಿಕೆಯಲ್ಲೇ ನಾಗರಾಜ್ ಕಣ್ಣೀರಿಟ್ಟರು.
ಕಾಂಗ್ರೆಸ್ ನನ್ನನ್ನು ಗುರುತಿಸಿದ್ದೇ ಖುಷಿ. ನಾನು ಕಾಂಗ್ರೆಸ್ನಲ್ಲಿ ಇರಲಿಲ್ಲ, ಆದರೂ ಸಹ ಕಾಂಗ್ರೆಸ್ ನನ್ನನ್ನು ಕರೆದು ಗುರುತಿಸುವ ಕೆಲಸ ಮಾಡಿದೆ. ಜಿಲ್ಲಾ ರಾಜಕಾರಣ ಸರಿ ಇಲ್ಲ, ಮೇ 23ಕ್ಕೆ ನಮ್ಮ ಬಲ ತೋರಿಸಬೇಕಿದೆ ಎಂದು ರೈತ ಮುಖಂಡ ತೇಜಸ್ವಿ ಪಟೇಲ್ ಹೇಳಿದರು.
ಒಟ್ಟಾರೆ, ದಾವಣಗೆರೆಯಲ್ಲಿ ಲಿಂಗಾಯುತ ಮತಗಳ ಪ್ರಾಬಲ್ಯ ಹೆಚ್ಚಿದೆ. ಆ ಎಲ್ಲಾ ಮತಗಳ ಮೇಲೆ ಬಿಜೆಪಿ ಕಣ್ಣಿಟಿತ್ತು, ಆದರೆ ಪಂಚಮಸಾಲಿ ಸಮಾಜವು ಬಿಜೆಪಿ ಮೇಲೆ ಮುನಿಸಿಕೊಂಡಿದ್ದು, ಕಾಂಗ್ರೆಸ್ಗೆ ವರವಾಗುತ್ತಾ ಎಂಬುದನ್ನು ನೋಡಬೇಕಿದೆ.
.