ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ದಾವಣಗೆರೆಯಲ್ಲಿ ಭಾಗವಹಿಸಬೇಕಿದ್ದ ಹಿಂದುಳಿದ ವರ್ಗಗಳ ಸಮಾವೇಶಕ್ಕೆ ಪ್ರಕೃತಿ ಅಸಹಕಾರ ಎದುರಾಗಿದೆ. ಸಿದ್ದರಾಮಯ್ಯ ಭಾಗವಹಿಸಬೇಕಿದ್ದ ಸಮಾವೇಶಕ್ಕೆ ಹವಾಮಾನ ವೈಪರೀತ್ಯ ಅಡ್ಡಿಯಾಗಿದ್ದು, ಹೆಲಿಕಾಪ್ಟರ್ ಲ್ಯಾಂಡಿಂಗ್ಗೆ ಅನುಮತಿ ಸಿಗದ ಕಾರಣ ದಾವಣಗೆರೆ ಪ್ರವಾಸ ರದ್ದಾಗಿದೆ.
ದಾವಣಗೆರೆಯಲ್ಲಿ ಬೆಳಗ್ಗಿನಿಂದಲೇ ಭಾರಿ ಮಳೆ ಯಾಗುತ್ತಿದೆ. ಕೆಲವೆಡೆ ಮೋಡ ಕವಿದಿದೆ. ಬೆಂಗಳೂರಿನಿಂದ ತೆರಳಬೇಕಿದ್ದ ಸಿದ್ದರಾಮಯ್ಯ ಹೆಲಿಕಾಪ್ಟರ್ ಅನ್ನು ದಾವಣಗೆರೆಯಲ್ಲಿ ಇಳಿಸಲು ಅವಕಾಶ ನಿರಾಕರಣೆಯಾಗಿದೆ. ಮಳೆ - ಮೋಡದಿಂದಾಗಿ ಸಿದ್ದರಾಮಯ್ಯ ಅವರ ಹಿಂದ ಸಮಾವೇಶಕ್ಕೆ ಸಹ ಮೋಡ ಕವಿದಂತಾಗಿದೆ.
ಜಕ್ಕೂರು ಏರೋಡ್ರಂನಿಂದ ಹೆಲಿಕಾಪ್ಟರ್ ಮೂಲಕ ಬೆಳಗ್ಗೆ 9.30ಕ್ಕೆ ತೆರಳಬೇಕಿದ್ದ ಸಿದ್ದರಾಮಯ್ಯ ಅನಿವಾರ್ಯ ಕಾರಣದಿಂದ ಬೆಂಗಳೂರಿನಲ್ಲೇ ಉಳಿಯುವಂತಾಗಿದೆ. ದಾವಣೆಗೆರೆಯಲ್ಲಿ ನಡೆಯಲಿರುವ ಜಾತಿಗಣತಿ ಅನುಷ್ಠಾನದ ಹೋರಾಟಕ್ಕೆ ತೆರಳಲು ಸಾಧ್ಯವಾಗಿಲ್ಲ. ಕೊನೆ ಕ್ಷಣದಲ್ಲಿ ದಾವಣಗೆರೆ ಪ್ರವಾಸ ರದ್ದು ಮಾಡಿದ್ದಾರೆ.
ಬೆಳಗ್ಗೆ 9.30ಕ್ಕೆ ಬೆಂಗಳೂರಿನಿಂದ ಹೊರಟು 11 ಗಂಟೆಗೆ ದಾವಣಗೆರೆ ಎಂಬಿಎ ಕಾಲೇಜು ಮೈದಾನ ತಲುಪಿ ಅಲ್ಲಿ ಮೊದಲು ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು. ಅದಾದ ಬಳಿಕ ಹಿಂದುಳಿದ ವರ್ಗಗಳ ಒಕ್ಕೂಟ ಆಯೋಜಿಸಿರುವ ಧರಣಿಯಲ್ಲಿ ಭಾಗವಹಿಸಬೇಕಿತ್ತು. ನಂತರ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷ ಕರೆ ಕೊಟ್ಟಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕಿತ್ತು.
ಇದನ್ನೂ ಓದಿ: ಆರೋಗ್ಯಕರ ಜೀವನಕ್ಕೆ ನಾನು ಇನ್ಮೇಲೆ ನಿಯಮಿತ ವಾಕ್ ಮಾಡ್ತೀನಿ : ಸಿಎಂ ಬೊಮ್ಮಯಿ
ಅಂತಿಮವಾಗಿ ಇತ್ತೀಚೆಗೆ ನಿಧನರಾದ ಕುರುಬ ಸಮಾಜದ ಗಣ್ಯರ ಗೌರವಾರ್ಥ ಆಯೋಜಿಸಿರುವ ಸಂಸ್ಮರಣ ಸಮಾರಂಭದಲ್ಲಿ ಪಾಲ್ಗೊಂಡು ಸಂಜೆ 4 ಗಂಟೆಗೆ ದಾವಣಗೆರೆಯಿಂದ ಹೆಲಿಕಾಪ್ಟರ್ ಮೂಲಕ ಹೊರಟು ಬೆಂಗಳೂರು ತಲುಪಬೇಕಿತ್ತು. ಆದರೆ, ಪ್ರಕೃತಿ ಅಸಹಕಾರದಿಂದಾಗಿ ಎಲ್ಲ ಕಾರ್ಯಕ್ರಮವನ್ನೂ ರದ್ದುಪಡಿಸಿ ಬೆಂಗಳೂರಲ್ಲೇ ಉಳಿಯುವ ಸ್ಥಿತಿ ಎದುರಾಗಿದೆ.