ದಾವಣಗೆರೆ : ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ವೀರಭದ್ರಪ್ಪ ಅವರು ಪಾಳು ಬಿದ್ದ ಉದ್ಯಾನವನಗಳಿಗೆ ಪುನರ್ಜೀವ ಕೊಟ್ಟು ಪರಿಸರ ಪ್ರೇಮ ಮೆರೆದಿದ್ದಾರೆ.
80 ವರ್ಷ ವಯಸ್ಸಾದರೂ ಯುವಕನಂತೆ ಕೆಲಸ ಮಾಡುವ ವೀರಭದ್ರಪ್ಪ ಅವರು ದಾವಣಗೆರೆಯ ವಿವೇಕಾನಂದ ಬಡಾವಣೆ ನಿವಾಸಿ. ಮೂಲತಃ ಚನ್ನಗಿರಿ ತಾಲೂಕಿನ ಹಿರೇಕೋಗಲೂರು ಗ್ರಾಮದವರು. ಚಿಕ್ಕಂದಿನಿಂದಲೂ ಪರಿಸರ ಪ್ರೇಮ ಹೊಂದಿದ್ದರು. ಇದೀಗ ವಿವೇಕಾನಂದ ಬಡಾವಣೆಯಲ್ಲಿ ಪಾಳು ಬಿದ್ದಿದ್ದ ಪಾರ್ಕ್ಗಳಿಗೆ ಕಾಯಕಲ್ಪ ನೀಡಿದ್ದಾರೆ.
ವೀರಭದ್ರಪ್ಪನವರು ವಿವೇಕಾನಂದ ಬಡಾವಣೆಗೆ ಬಂದು ವಾಸ ಮಾಡಿದಾಗ ಅಲ್ಲಿ ಪಾಲಿಕೆಗೆ ಸೇರಿದ ಎರಡು ಪಾರ್ಕ್ಳಿದ್ದವು. ಗಿಡಗಂಟೆಗಳು ಬೆಳೆದು ನಿಂತಿದ್ದವು. ವೀರಭದ್ರಪ್ಪ ಅವರು ಪಾಳು ಬಿದ್ದಿದ್ದ ಪಾರ್ಕ್ನಲ್ಲಿ ಮುಳ್ಳು ಗಿಡಗಳನ್ನು ಕಡಿದು, ಸ್ವಚ್ಛ ಮಾಡಿ ಸುಂದರವಾದ ಪಾರ್ಕ್ ನಿರ್ಮಾಣ ಮಾಡಿದ್ದಾರೆ.
ಅವರ ಸ್ವಂತ ಖರ್ಚಿನಲ್ಲಿ ನವಗ್ರಹ ವೃಕ್ಷಗಳು, ಪಂಚವಟಿ ವೃಕ್ಷ, ಬನ್ನಿ ಸೇರಿದಂತೆ ಪೂಜೆಗೆ ಯೋಗ್ಯವಾದ ಮರಗಳನ್ನು ಬೆಳೆಸಿ ಪೋಷಿಸುತ್ತಿದ್ದಾರೆ. ಪಾರ್ಕ್ ಅನ್ನು ದೇವಾಲಯದ ರೀತಿ ನಿರ್ಮಾಣ ಮಾಡಿದ್ದಾರೆ. ಸ್ವಂತ ಖರ್ಚಿನಲ್ಲಿ ಪಾರ್ಕ್ ಅಭಿವೃದ್ಧಿ ಮಾಡಿದ್ದು, ಇದರಿಂದಲೇ ನನಗೆ ನೆಮ್ಮದಿ ಎಂದು ವೀರಭದ್ರಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರತಿನಿತ್ಯ ಎರಡು ಪಾರ್ಕ್‌ಗಳನ್ನು ಪೋಷಣೆ ಮಾಡುವುದೇ ಇವರ ಕಾಯಕವಾಗಿದೆ. ಪ್ರತಿದಿನ ಬೆಳಗ್ಗೆ ಸಂಜೆ ಪಾರ್ಕ್ನಲ್ಲಿ ಗಿಡಗಳಿಗೆ ನೀರು ಹಾಕಿ ಪೋಷಿಸುವ ಕೆಲಸವನ್ನು ಮಾಡೋ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ತನ್ನ ನಂತರ ಈ ಪಾರ್ಕ್ ಅನ್ನು ನೋಡಿಕೊಳ್ಳಲು ಯಾರು ಇರೋದಿಲ್ಲ ಎಂದು ತನ್ನ ಕುಟುಂದ ಹೆಸರಿನಲ್ಲಿ ಟ್ರಸ್ಟ್ ಮಾಡಿ ಒಂದು ಲಕ್ಷ ರೂ. ಹಣವನ್ನು ಡಿಪಾಸಿಟ್ ಮಾಡಿದ್ದಾರೆ.
ಅದರಿಂದ ಬರುವ ಹಣವನ್ನು ಪಾರ್ಕ್ ಅಭಿವೃದ್ಧಿ ಕೆಲಸಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂದು ಅವರ ಮಕ್ಕಳಿಗೆ ತಿಳಿಸಿದ್ದಾರೆ. ಇನ್ನು ವೀರಭದ್ರಪ್ಪರಿಗೆ ಇಬ್ಬರು ಮಕ್ಕಳಿದ್ದಾರೆ. ಅವರು ಕೂಡ ಈ ಕೆಲಸಕ್ಕೆ ಬೆಂಬಲವಾಗಿ ನಿಂತಿದ್ದಾರೆ.
ಇದನ್ನೂ ಓದಿ: ರಂಗನಾಥ ಸ್ವಾಮಿ ದೇವಾಲಯಕ್ಕೆ ಸಿಎಂ ಬೊಮ್ಮಾಯಿ, ಮಾಜಿ ಸಿಎಂ BSY ಭೇಟಿ.. ವಿಶೇಷ ಪೂಜೆ
ವೀರಭದ್ರಪ್ಪನವರು ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿದ ನಂತರ ಪಾರ್ಕ್‌ಗಳನ್ನು ಅಭಿವೃದ್ಧಿ ಮಾಡಿ ನೆಮ್ಮದಿ ಕಂಡುಕೊಂಡು ಇತರರಿಗೂ ಮಾದರಿಯಾಗಿದ್ದಾರೆ. ಇವರ ಈ ಕಾರ್ಯಕ್ಕೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.