ರಾಣೇಬೆನ್ನೂರ : ನಗರಸಭೆ 2017-18ರ ಸಾಲಿನಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ತೆರಿಗೆ ಮತ್ತು ಸರ್ಕಾರದ ಅನುದಾನ ಮೂಲಕ ನಗರದಲ್ಲಿ ನಿರ್ಮಿಸಿದ್ದ 72 ಹೊಸ ಮಳಿಗೆಗಳು ಹರಾಜಾಗದೆ ನಗರಸಭೆ ಆದಾಯಕ್ಕೆ 1.5 ಕೋಟಿ ನಷ್ಟವಾಗಿದೆ.
2018ರಲ್ಲಿ ನಗರಸಭೆ 72 ಮಳಿಗೆಗಳನ್ನು ಹರಾಜು ಮಾಡಲು ಮುಂದಾಯಿತು. ಆದರೆ, ಕೆಲ ಕಾನೂನಿನ ಅಡೆತಡೆಗಳಿಂದ ಹರಾಜು ಪ್ರಕ್ರಿಯೆ ಸ್ಥಗಿತಗೊಂಡಿತು. ಇದರಿಂದ ನಗರಸಭೆ ಆದಾಯಕ್ಕೆ ಬಾಡಿಗೆ ರೂಪದಲ್ಲಿ ಬರಬೇಕಾಗಿದ್ದ ಒಂದೂವರೆ ಕೋಟಿ ನಷ್ಟವಾಗಿದೆ ಎನ್ನಲಾಗಿದೆ.
ಹರಾಜು ಅಡೆತಡೆಗೆ ಕಾರಣ : 2017ರಲ್ಲಿ ನಗರಸಭೆ ಹಳೆ ಮಳಿಗೆಗಳನ್ನು ಕೆಡವಿ ಹೊಸ ಮಳಿಗೆಗಳನ್ನು ನಿರ್ಮಿಸಲು ಮುಂದಾಯಿತು. ಈ ಸಮಯದಲ್ಲಿ ಹಳೆ ಮಳಿಗೆಗಳನ್ನು ಬಾಡಿಗೆ ಪಡೆದಿದ್ದ ಅಂಗಡಿ ಮಾಲೀಕರು ಹೊಸ ಮಳಿಗೆಗಳು ನಿರ್ಮಾಣವಾದ ನಂತರ ನಮಗೆ ನೀಡಬೇಕು ಎಂದು ನಗರಸಭೆಗೆ ಒತ್ತಾಯಿಸಿದ್ದರು. ಇದರಂತೆ ಅಂದಿನ ನಗರಸಭೆ ಒಮ್ಮತದ ಮೂಲಕ ಠರಾವನ್ನು ಪಾಸ್ ಮಾಡಿತ್ತು.
ಆದರೆ, ನಗರಸಭೆ ಹಳೆ ಬಾಡಿಗೆದಾರರಿಗೆ ಹೊಸ ಮಳಿಗೆಗಳು ನೀಡದೆ ಎಲ್ಲಾ ಮಳಿಗೆಗಳಿಗೆ ಹರಾಜು ಕರೆಯಲಾಯಿತು. ಈ ಕಾರಣಕ್ಕೆ ಹಳೆ ಬಾಡಿಗೆದಾರ ನ್ಯಾಯಾಲಯದ ಮೊರೆ ಹೋದರು. ಇದರಿಂದ ಮಳಿಗೆಗಳನ್ನು ಅಂದಿನಿಂದ ಇಂದಿನವರೆಗೂ ಹರಾಜಿಲ್ಲದೆ ನಗರಸಭೆ ಆದಾಯಕ್ಕೆ ನಷ್ಟ ಉಂಟಾಗಿದೆ.